– ತಕ್ಕ ಪ್ರತ್ಯುತ್ತರ ನೀಡ್ತಿದೆ ಸೇನೆ
ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ವಾಯುಸೇನೆ ಉಗ್ರರ ಅಡಗುತಾಣಗಳ ಮೇಲೆ ದಾಳಿ ಮಾಡಿ ಸುರಕ್ಷಿತವಾಗಿ ವಾಪಸ್ ಆದ ಬೆನ್ನಲ್ಲೇ ಇದೀಗ ಇಂಡೋ-ಪಾಕ್ ಗಡಿಯಲ್ಲಿ ಪಾಕಿಸ್ತಾನ ಸೇನೆ ಹತಾಶೆಯಿಂದ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮಾಡಿದೆ.
ಎಲ್‍ಒಸಿಯ ಸುಮಾರು 50 ಕಡೆಗಳಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ನಿರಂತರವಾಗಿ ಶೆಲ್ ದಾಳಿ ಕೂಡ ಮಾಡಿದೆ. ಪಾಕಿಸ್ತಾನ ಸೇನೆಯ ಉದ್ಧಟತನಕ್ಕೆ ಭಾರತ ಕೂಡ ಅದೇ ದಾಟಿಯಲ್ಲಿ ಉತ್ತರ ನೀಡುತ್ತಿದೆ. ಪಾಕ್ ಸೇನೆಯ ಮೇಲೆ ನಿರಂತರ ಗುಂಡಿನ ದಾಳಿ ನಡೆಸಿದೆ.
ಮಂಗಳವಾರ ಸಂಜೆ 5.30ಕ್ಕೆ ಫಿರಂಗಿ ಮೂಲಕ ದೊಡ್ಡ ಶೆಲ್ ದಾಳಿ ಪ್ರಾರಂಭಿಸುವ ಮೂಲಕ ಅಖನೂರ್, ನೌಶೇರಾ, ಕೃಷ್ಣಾ ಘಾಟಿ ಸೆಕ್ಟರ್ ಗಳಲ್ಲಿ ಪಾಕ್ ಪುಂಡಾಟ ಮೆರೆಯುತ್ತಿದೆ. ಘಟನೆಯಲ್ಲಿ ಭಾರತೀಯ ಸೇನೆಯ ಐವರು ಸೈನಿಕರು ಗಾಯಗೊಂಡಿದ್ದಾರೆ. ಗಾಯಾಳು ಸೈನಿಕರನ್ನು ಸಮೀಪದ ಸೇನಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಹಾಗೇ ಸಣ್ಣ ಶಸ್ತ್ರಾಸ್ತ್ರಗಳ ಮುಖಾಂತರವೂ ಗುಂಡಿನ ದಾಳಿ ನಡೆಸಿದೆ ಎಂದು ರಕ್ಷಣಾ ಇಲಾಖೆ ತಿಳಿಸಿದೆ. ಭಾರತ ಸೈನ್ಯ ಕೂಡ ಇದನ್ನು ದಿಟ್ಟವಾಗಿ ಎದುರಿಸುತ್ತಿದೆ. ಯಾವುದೇ ಭಯ ಪಡುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಪರಿಣಾಮ ಇದೀಗ ಗಡಿಯಲ್ಲಿ ಅಕ್ಷರಶಃ ಯುದ್ಧ ಪರಿಸ್ಥಿತಿ ನಿರ್ಮಾಣವಾಗಿದೆ.
https://www.youtube.com/watch?v=EUNAEc49iJg
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv