ಹುಬ್ಬಳ್ಳಿ: ನೇಪಾಳಕ್ಕೆ (Nepal) ತೀರ್ಥಯಾತ್ರೆಗೆಂದು ತೆರಳಿದ್ದ ಹುಬ್ಬಳ್ಳಿಯ (Hubballi) ಐವರು ಕಠ್ಮಂಡುವಿನಲ್ಲಿ ಸಿಲುಕಿದ್ದು, ಭಾರತಕ್ಕೆ ಸುರಕ್ಷಿತವಾಗಿ ವಾಪಸಾಗಲು ಆಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ.
ಹುಬ್ಬಳ್ಳಿ ಕೇಶ್ವಪುರದ ಗಾಡಸನ್ ಅಪಾರ್ಟ್ಮೆಂಟ್ ನಿವಾಸಿಗಳು ಆ.31 ರಂದು ಖಾಸಗಿ ಕಂಪನಿಯ ಟೂರ್ ಪ್ಯಾಕೇಜ್ ಮೂಲಕ ಹುಬ್ಬಳ್ಳಿಯಿಂದ ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗಿದ್ದರು. ಬಿಂದುಮಾಧವ ಕುಲಕರ್ಣಿ (70), ಸುಂದರಾ ಕುಲಕರ್ಣಿ (65), ವಿದ್ಯಾ ಜೋಶಿ (65), ನರೇಂದ್ರ ಜೋಶಿ (70) ನೇಪಾಳ ಗಲಭೆಗೂ ಮುನ್ನ ಮಾನಸ ಸರೋವರಕ್ಕೆ ತೆರಳಿದ್ದರು. ಇದನ್ನೂ ಓದಿ: ಪ್ರತಿಭಟನಾಕಾರರಿಂದ ಹೋಟೆಲ್‌ಗೆ ಬೆಂಕಿ – ನೇಪಾಳದಲ್ಲಿ ಭಾರತದ ಮಹಿಳೆ ದುರ್ಮರಣ
ನರೇಂದ್ರ ಜೋಶಿ ಅವರಿಗೆ ಸರೋವರದ ಸಮೀಪದಲ್ಲಿ ಆಮ್ಲಜನಕದ ಕೊರತೆಯಿಂದ ಮೃತಪಟ್ಟಿದ್ದರು. ಅವರ ಅಂತ್ಯಕ್ರಿಯೆಯನ್ನು ಮಾನಸ ಸರೋವರದ ಬಳಿಯೇ ಮಾಡಿದ್ದ ಉಳಿದವರು, ಅಲ್ಲಿಂದ ಮರು ಪ್ರಯಾಣ ಬೆಳೆಸಿ ಗಲಭೆಗೂ ಮುನ್ನ ನೇಪಾಳದ ಕಠ್ಮಂಡುಗೆ ತಲುಪಿದ್ದರು.
ಇದೇ ವೇಳೆ ನೇಪಾಳದಲ್ಲಿ ಉಗ್ರ ಹೋರಾಟ ಆರಂಭವಾಗಿತ್ತು. ಹೀಗಾಗಿ, ನೇಪಾಳದಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇವರಿಗೆ ಸಹಾಯ ಮಾಡಲು ಸತೀಶ್ ಕುಲಕರ್ಣಿ ಪುತ್ರ ಸಚಿನ್ ಕುಲಕರ್ಣಿ ನೇಪಾಳಕ್ಕೆ ತೆರಳಿದ್ದರು. ಇದೀಗ ಸಚಿನ್ ಕುಲಕರ್ಣಿ ಸೇರಿ ಐವರು ನೇಪಾಳದಲ್ಲಿ ಸಿಲುಕಿದ್ದಾರೆ.
ಸದ್ಯ ಕಠ್ಮಂಡುವಿನ ಖಾಸಗಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದು, ಶನಿವಾರ ಬೆಂಗಳೂರಿಗೆ ಬರಲು ಫ್ಲೈಟ್ ಟಿಕೆಟ್ ಬುಕ್ ಮಾಡಲಾಗಿದೆ. ಗುರುವಾರ ಇಡೀ ದಿನ ವಿಮಾನ ನಿಲ್ದಾಣದಲ್ಲಿ ಕಾದರೂ, ಭಾರತಕ್ಕೆ ಮರಳಲು ಯಾವುದೇ ವ್ಯವಸ್ಥೆ ಇರಲಿಲ್ಲ. ಸದ್ಯ ಇಲ್ಲಿ ಕರ್ಪ್ಯೂ ಜಾರಿ ಇರುವುದರಿಂದ ಹೊರಬರಲು ಆಗ್ತಿಲ್ಲ. ಶನಿವಾರ ನಾವೇ ಬೆಂಗಳೂರಿಗೆ ಬರ್ತಿದ್ದೇವೆ ಎಂದು ಸತೀಶ್ ಕುಲಕರ್ಣಿ ಅವರು ಮಾಹಿತಿ ನೀಡಿದ್ದಾರೆ.