ವಿಜಯಪುರ: ಚಹಾ ಕುಡಿಯಲು ರಸ್ತೆ ಬದಿ ನಿಂತಿದ್ದವರ ಮೇಲೆ ಕಾರು ಹರಿದು ಪರಿಣಾಮ ಐವರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸೋಲಾಪುರ ಸಮೀಪದ ತುಳಜಾಪುರದಲ್ಲಿ ನಡೆದಿದೆ.
ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕಾನ್ನಾಳ ಗ್ರಾಮದ ಟಿಪ್ಪು ಉಮರ್ ಸಾಬ್ ಚಪ್ಪರ್ ಬಂದ್(23), ಅಬ್ದುಲ್ ಸಾಬ್ ಚಪ್ಪರ್ ಬಂದ್(40) ಹಾಗೂ ಬಸವನ ಬಾಗೇವಾಡಿ ನಿವಾಸಿ ಅಮೀರ್ ನಂದವಾಡಗಿ ಮೃತಪಟ್ಟ ದುರ್ದೈವಿಗಳು. ಉಳಿದ ಇಬ್ಬರನ್ನು ಮಹಾರಾಷ್ಟ್ರದ ಮೂಲದವರು ಎಂದು ಗುರುತಿಸಲಾಗಿದೆ.
ವಿಜಯಪುರದ ಮೂವರು ತುಳಜಾಪುರದ ದೇವಿ ದರ್ಶನ ಪಡೆದು ಕಾರಿನಲ್ಲಿ ಸೋಲಾಪುರಕ್ಕೆ ಬರುತ್ತಿದ್ದರು. ಈ ವೇಳೆ ಟಯರ್ ಪಂಚರ್ ಹಾಕಿಸಲು ನಿಂತಿದ್ದ ಬೊಲೆರೋ ಗೆ ಅತಿವೇಗವಾಗಿ ಬಂದು ಕಾರು ಡಿಕ್ಕಿ ಹೊಡೆದಿದೆ. ನಂತರ ರಸ್ತೆ ಬದಿ ನಿಂತಿದ್ದವರಿಗೆ ಹೋಗಿ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನಲ್ಲಿದ್ದ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಚಹಾ ಕುಡಿಯುತ್ತಿದ್ದ ಮಹಾರಾಷ್ಟ್ರದ ಇಬ್ಬರು ಮೃತಪಟ್ಟಿದ್ದಾರೆ. ಅಪಘಾತದಲ್ಲಿ 9 ಮಂದಿ ಗಾಯಗೊಂಡಿದ್ದು, ಅವರನ್ನು ಮಹಾರಾಷ್ಟ್ರದ ಸೋಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಸಂಬಂಧ ತುಳಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.