ಮಂಗಳೂರು: ಹಸುಗಳನ್ನು ಸಾಗಿಸುತ್ತಿದ್ದ ಐಷಾರಾಮಿ ಕಾರು ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಐದು ಜಾನುವಾರಗಳು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಎಂಬಲ್ಲಿ ನಡೆದಿದೆ.
ಕಳ್ಳರು ಐಷಾರಾಮಿ ಕಾರಿನಲ್ಲಿ ಆರು ಹಸುಗಳನ್ನು ಅಮಾನವೀಯ ರೀತಿಯಲ್ಲಿ ತುಂಬಿಸಿಕೊಂಡು ಹೋಗುತ್ತಿದ್ದರು. ಆದರೆ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಬಳಿ ಕಾರು ಅಪಘಾತಕ್ಕೀಡಾಗಿದೆ. ಪರಿಣಾಮ ಕಾರಿನಲ್ಲಿದ್ದ ಐದು ಹಸುಗಳು ಸಾವನ್ನಪ್ಪಿದ್ದು, ಹಸುವೊಂದರ ಸ್ಥಿತಿ ಗಂಭೀರವಾಗಿದೆ.
ಮಂಗಳೂರಿನಲ್ಲಿ ಇತ್ತೀಚೆಗೆ ಇಂತಹ ಪ್ರಕರಣಗಳ ಹೆಚ್ಚಾಗುತ್ತಿದ್ದು, ಅತೀ ಹೆಚ್ಚಾಗಿ ದನಕಳ್ಳತನ ಮಾಡುತ್ತಿದ್ದಾರೆ. ಅದೇ ರೀತಿ ಕಳೆದ ದಿನವೂ ಒಂದು ಕಾರಿನಲ್ಲಿ ಆರು ಹಸುಗಳನ್ನು ತುಂಬಿಕೊಂಡು ಹೋಗುತ್ತಿದ್ದರು. ಕಾರಿನ ಹಿಂದಿನ ಸೀಟ್‍ಗಳನ್ನು ತೆಗೆದು ಹಸುಗಳನ್ನು ತುಂಬಿದ್ದರು. ಜೊತೆಗೆ ಕಳ್ಳತನ ಬಗ್ಗೆ ಬೇರೆಯವರಿಗೆ ತಿಳಿಯಬಾರದೆಂದು ಕಾರಿಗೆ ಟಿಂಟ್ ಗ್ಲಾಸ್ ಹಾಕಿದ್ದರು.
ಅದರಂತೆಯೇ ಇವರು ಯಾರಿಗೂ ಗೊತ್ತಾಗದಂತೆ ಎರಡು ಚೆಕ್ ಪೋಸ್ಟ್ ದಾಟಿ ಹೋಗಿದ್ದಾರೆ. ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಕೂಡ ಚೆಕ್ ಮಾಡಿಲ್ಲ. ಆದರೆ ಅಪಘಾತವಾದ ತಕ್ಷಣ ಕಾರು ಮತ್ತು ಗೋವುಗಳನ್ನು ಬಿಟ್ಟು ಕಳ್ಳರು ಪರಾರಿಯಾಗಿದ್ದಾರೆ. ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ.
ಈ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.