ಬೆಂಗಳೂರು: ಸುಹಾಸ್ ಶೆಟ್ಟಿ ಮೇಲೂ ಕೊಲೆ ಸೇರಿದಂತೆ ಐದು ಕೇಸ್‌ಗಳಿವೆ. ಹೀಗಾಗಿ, ನಾವು ಅವರ ಮನೆಗೆ ಭೇಟಿ ಕೊಟ್ಟಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwar) ಹೇಳಿಕೆ ನೀಡಿದರು.
ಸುಹಾಸ್ ಶೆಟ್ಟಿ (Suhas Shetty) ಕುಟುಂಬಕ್ಕೆ ಸರ್ಕಾರದಿಂದ ಭೇಟಿ ನೀಡಿ ಯಾರೂ ಸಾಂತ್ವನ ಹೇಳದ ವಿಚಾರವಾಗಿ ಮಾತನಾಡಿದ ಅವರು, ಇದು ಒಂದು ಕೊಲೆ ಪ್ರಕರಣ. ಸುಹಾಸ್ ಶೆಟ್ಟಿ ಮೇಲೂ ಕೇಸ್‌ಗಳಿವೆ, ಐದು ಕೇಸ್‌ಗಳು ಅವರ ಮೇಲಿವೆ. ಹಾಗಾಗಿ, ನಾವು ಭೇಟಿ ಕೊಟ್ಟಿಲ್ಲ. ಆದರೆ, ಸುಹಾಸ್ ಶೆಟ್ಟಿ ಮನೆಗೆ ನ್ಯಾಯ ಕೊಡಿಸುವ ಕೆಲಸ ಸರ್ಕಾರ ಮಾಡಲಿದೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆ – ಪ್ರಕರಣ ಎನ್‌ಐಎಗೆ ನೀಡುವಂತೆ ಕುಟುಂಬಸ್ಥರ ಆಗ್ರಹ
ಹಿಂದೂ ಕಾರ್ಯರ್ಕನ ಕೊಲೆ ಪ್ರಕರಣದಲ್ಲಿ ಬಂಧಿತರು ನಿಜವಾದ ಆರೋಪಿಗಳಾ ಎಂಬ ಅನುಮಾನ ವ್ಯಕ್ತವಾಗ್ತಿರುವ ಕುರಿತು ಪ್ರತಿಕ್ರಿಯಿಸಿ, ಯಾರನ್ನೋ ಹೇಗೆ ಆರೋಪಿ ಅಂತ ಹೇಳಲು ಆಗುತ್ತಾ? ಕೊಲೆ ಪ್ರಕರಣದಲ್ಲಿ ಯರ‍್ಯಾರನ್ನೋ ಬಂಧಿಸಲು ಆಗಲ್ಲ ಎಂದು ತಿಳಿಸಿದರು.
ನಿನ್ನೆ ಮುಸ್ಲಿಂ ಸಮುದಾಯದ ಪ್ರಮುಖರು ಅವರೇ ಬಂದು ನನ್ನ ಭೇಟಿ ಮಾಡಿದ್ರು. ಬರೋರಿಗೆ ಬೇಡ ಅನ್ನೋಕ್ಕಾಗುತ್ತಾ? ಬೇರೆ ಸಮುದಾಯದವರೂ ಬರಬಹುದಿತ್ತು. ಯಾರೂ ಬರಲಿಲ್ಲ ಎಂದರು. ಇದನ್ನೂ ಓದಿ: ರಕ್ತಕ್ಕೆ ರಕ್ತವೇ ಉತ್ತರ, ಸುಹಾಸ್ ಹತ್ಯೆ ಬಳಿಕ ಪ್ರತೀಕಾರದ ಪೋಸ್ಟ್ – 12 ಎಫ್‌ಐಆರ್ ದಾಖಲು
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್‌ಐಎ ತನಿಖೆಗೆ ವಹಿಸಲು ಬಿಜೆಪಿ ಒತ್ತಾಯದ ಬಗ್ಗೆ ಮಾತನಾಡಿ, ಅದು ಬಿಜೆಪಿಯವರ ಅಭಿಪ್ರಾಯ. ನಮ್ಮ ಪೊಲೀಸ್ ಇಲಾಖೆ ಸಮರ್ಥವಾಗಿ ಕೆಲಸ ಮಾಡ್ತಾ ಇದೆ. ಎಂಟು ಜನರನ್ನ ಪ್ರಕರಣದಲ್ಲಿ ಬಂಧಿಸಲಾಗಿದೆ. ತನಿಖೆ ಚೆನ್ನಾಗಿ ನಡೆಯುತ್ತಿದೆ ಎಂಬುದು ನಮ್ಮ ಅಭಿಪ್ರಾಯ. ಹಾಗಾಗಿ, ಈ ಪ್ರಕರಣ ಎನ್‌ಐಎಗೆ ಕೊಟ್ಟಿಲ್ಲ. ಆ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡ್ತೇವೆ. ಬಿಜೆಪಿ ಆರೋಪ ಸರಿಯಲ್ಲ, ಬಿಜೆಪಿಯವರ ಕಾಲದಲ್ಲೂ ಮರ್ಡರ್‌ಗಳು ಆಗಿವೆ ಎಂದು ಹೇಳಿದರು.
ನಾವು ಎಲ್ಲಾ ರೀತಿಯ ಕ್ರಮಗಳನ್ನ ತೆಗೆದುಕೊಳ್ಳುತ್ತಿದ್ದೇವೆ. ಮರ್ಡರ್ ಆಗುತ್ತೆ ಎಂದು ಕ್ಲೂ ಸಿಕ್ಕಿದರೂ ಅಲರ್ಟ್ ಮಾಡಿ ತಡೆಯುವ ಕೆಲಸ ಆಗ್ತಿದೆ. ಕೊಲೆ ನಂತರವೂ ಆರೋಪಿಗಳನ್ನು ಬಂಧಿಸಲಾಗ್ತಿದೆ. ಎಲ್ಲಾ ಎಚ್ಚರಿಕೆಗಳನ್ನೂ, ಸೂಚನೆಗಳನ್ನ ಎಸ್ಪಿಗಳಿಗೆ ಕೊಟ್ಟಿದ್ದೇವೆ ಎಂದರು. ಇದನ್ನೂ ಓದಿ: ಸುಹಾಸ್ ಹತ್ಯೆ ಕೇಸ್ | ಮಂಗಳೂರು – ಚಿಕ್ಕಮಗಳೂರು ಗಡಿಯಲ್ಲಿ ಭಾರೀ ಬಂದೋಬಸ್ತ್