ಉಡುಪಿ: ಇಲ್ಲಿನ ಮಲ್ಪೆ ಬಂದರಿನಿಂದ ಆಳಸಮುದ್ರಕ್ಕೆ ಮೀನುಗಾರಿಕೆಗೆ ಹೊರಟಿದ್ದ ಬೋಟ್ ನಾಪತ್ತೆಯಾಗಿ ಇಂದಿಗೆ 10 ದಿನ ಕಳೆದರೂ ಮೀನುಗಾರರು ಪತ್ತೆಯಾಗಿಲ್ಲ. ಅರಬ್ಬೀ ಸಮುದ್ರದ ನಡುವಿನಿಂದ ಬೋಟ್ ಸಮೇತ ಮೀನುಗಾರರನ್ನು ಪಾಕಿಸ್ತಾನದ ಉಗ್ರರು ಅಪಹರಣ ಮಾಡಿರಬಹುದು ಎಂಬ ಗುಮಾನಿ ಶುರುವಾಗಿದೆ.
ಮಲ್ಪೆಯ ಸರ್ವ ಋತು ಬಂದರಿನಲ್ಲಿ ಕಣ್ಣು ಹಾಯಿಸಿದಷ್ಟೂ ಮೀನುಗಾರಿಕಾ ಬೋಟ್‍ಗಳೇ ಕಾಣುತ್ತವೆ. ಆದರೆ ಕಳೆದ ವಾರದಿಂದ ಇಲ್ಲಿ ನೀರವ ಮೌನ ಆವರಿಸಿದೆ. ಇದಕ್ಕೆ ಕಾರಣ ಮಲ್ಪೆ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಎಂಟು ಮಂದಿ ಮೀನುಗಾರರು ಬೋಟು ಸಮೇತ ನಾಪತ್ತೆಯಾಗಿರುವುದು. ಈ ಸಂಬಂಧ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
Advertisement
Advertisement
ನಾಪತ್ತೆಯಾದವರಿಗೆ ಮಂಗಳೂರು, ಗೋವಾದ ಕರಾವಳಿ ಕಾವಲು ಪಡೆ ತೀವ್ರ ಶೋಧ ನಡೆಸುತ್ತಿದ್ದರೂ ಮೀನುಗಾರರು ಮಾತ್ರ ಪತ್ತೆಯಾಗಿಲ್ಲ. ಮೀನುಗಾರಿಕೆಗೆ ತೆರೆಳಿದ್ದ ಬೋಟ್ ಗೆ ಅಳವಡಿಸಿದ್ದ ಜಿಪಿಎಸ್ ಸಂಪರ್ಕಕ್ಕೆ ಸಿಗುತ್ತಿಲ್ಲ. 8 ಮೀನುಗಾರರ ಫೋನ್ ಗಳು ಸ್ವಿಚ್ ಆಫ್ ಆಗಿದ್ದು, ಎಲ್ಲಿ ಏನಾಗಿದೆ ಎಂಬ ಮಾಹಿತಿ ಸಿಗುತ್ತಿಲ್ಲ. ಇದರ ನಡುವೆ ಈಗ ಮೀನುಗಾರರನ್ನು ಪಾಕಿಸ್ತಾನದ ಉಗ್ರರು ಅಪಹರಿಸಿರಬಹುದು ಎಂಬ ಅನುಮಾನ ಸೃಷ್ಟಿಯಾಗಿದೆ.
Advertisement
Advertisement
ಸಾಮಾನ್ಯವಾಗಿ ಆಳಸಮುದ್ರದ ಮೀನುಗಾರಿಕೆಗೆ ತೆರಳುವ ಬೋಟ್‍ಗಳು ಎರಡು ವಾರಗಳ ಕಾಲ ಸಮುದ್ರದಲ್ಲಿರುತ್ತವೆ. ಸುವರ್ಣ ತ್ರಿಭುಜ ಎಂಬ ಬೋಟಿನಲ್ಲಿ ಡಿಸೆಂಬರ್ 13 ರಂದು ರಾತ್ರಿ 11 ಗಂಟೆ ಸುಮಾರಿಗೆ ಹೊರಟ 8 ಮಂದಿ ಡಿಸೆಂಬರ್ 15ರ ರಾತ್ರಿ ಒಂದು ಗಂಟೆಯವರೆಗೆ ಸಂಪರ್ಕದಲ್ಲಿದ್ದರು. ನಂತರ ಸಂಪರ್ಕ ಸಿಗದೆ ನಾಪತ್ತೆಯಾಗಿದ್ದಾರೆ. ಮೀನುಗಾರರ ಮುಖಂಡರ ಪ್ರಕಾರ ಒಂದೋ ನಾಪತ್ತೆಯಾದ ಬೋಟ್ ದರೋಡೆಗೆ ಒಳಗಾಗಿರಬಹುದು. ಇಲ್ಲವೇ ಪಾಕಿಸ್ತಾನ ಗಡಿಯ ಭಯೋತ್ಪಾದಕರು ಬೋಟನ್ನು ಹೈಜಾಕ್ ಮಾಡಿರಬಹುದು ಎಂದು ಶಂಕಿಸಲಾಗಿದೆ.
ಈ ಹಿಂದೆ ಇಂತಹ ಅವಘಡ ಸಂಭವಿಸಿದಾಗ ಮೀನುಗಾರರು ಮೊಬೈಲ್ ಮೂಲಕ ಸಂಪರ್ಕ ಮಾಡಿ ಮಾಹಿತಿ ನೀಡುತ್ತಿದ್ದರು. ಈ ಬಾರಿ ಅಂತಹ ಯಾವುದೇ ಸುಳಿವೂ ಇಲ್ಲದೇ ಇರುವುದು ಮೀನುಗಾರರನ್ನು ಆತಂಕಕ್ಕೆ ತಳ್ಳುವಂತೆ ಮಾಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv