ಚಾಮರಾಜನಗರ: ಪೊಲೀಸ್ ಪೇದೆಯೊಬ್ಬ ತನ್ನ ಮೊದಲ ಪತ್ನಿಗೆ ವಿಚ್ಛೇದನ ನೀಡುವುದಕ್ಕೆ ಮುನ್ನವೇ ಎರಡನೇ ಮದುವೆಯಾಗಿ ಮಗು ಆಗಿದ್ದು, ಮೊದಲ ಪತ್ನಿ ನ್ಯಾಯಕ್ಕಾಗಿ ಪೊಲೀಸ್ ಮತ್ತು ನ್ಯಾಯಾಲಯಕ್ಕೆ ಅಲೆಯುತ್ತಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ವಿನೂತ ಪೊಲೀಸ್ ನ ಮೊದಲ ಪತ್ನಿ, ತನ್ನ 9 ವರ್ಷದ ಮಗಳೊಂದಿಗೆ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ನ್ಯಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ಇದಲ್ಲದೇ ನನಗೆ ನ್ಯಾಯ ಕೊಡಿ ಎಂದು ಗಂಡನ ಮನೆ ಮುಂದೆ ಹೋದರೆ ಪತಿಯ ಪೋಷಕರು ಹಾಗೂ ಪತಿ ಜೊತೆ ವಿನೂತ ಜಗಳವಾಡುತ್ತಾ ಇದ್ದಾರೆ. ಪ್ರತಿ ನಿತ್ಯವೂ ಸಹ ಇದೇ ರಗಳೆಯಾಗಿದೆ.
ರಾಮನಗರ ಜಿಲ್ಲೆ ಸಾತನೂರು ಗ್ರಾಮದ ವಿನೂತ ಅವರಿಗೆ 11 ವರ್ಷಗಳ ಹಿಂದೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಪಟ್ಟಣದ ನಿವಾಸಿ ಮಹೇಶ್ ಜೊತೆ ಮದುವೆಯಾಗಿತ್ತು. ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಗಿ ವಿವಾಹ ವಿಚ್ಛೇದನಕ್ಕೆ ಮುಂದಾಗಿದ್ದರು. ಆದರೆ ನ್ಯಾಯಾಲಯ ಇವರಿಗೆ ಇದೂವರೆಗೂ ವಿಚ್ಛೇದನ ನೀಡಿಲ್ಲ. ಇದರ ಮಧ್ಯೆ ಮಹೇಶ್ ಮತ್ತೊಬ್ಬಳೊಂದಿಗೆ ಮದುವೆಯಾಗಿ ಮಗು ಕೂಡ ಆಗಿದೆ.
ಮದುವೆಯಾಗಿ ಮಗು ಆಗಿರುವ ಬಗ್ಗೆ ಪೊಲೀಸರಿಗೆ ದಾಖಲಾತಿ ಸಮೇತ ದೂರು ನೀಡಿದರೂ ಕ್ರಮ ಕೈಗೊಳ್ಳದೇ ಮಹೇಶ್ ನ ತನಿಖಾಧಿಕಾರಿಗಳು ರಕ್ಷಣೆ ಮಾಡುತ್ತಿದ್ದಾರೆ ಎಂದು ವಿನೂತ ಆರೋಪ ಮಾಡುತ್ತಿದ್ದಾರೆ.
ಪತಿಯಿಂದ ಆಗಿರುವ ಅನ್ಯಾಯದ ಬಗ್ಗೆ ಕೇಳಲು ಗಂಡನ ಮನೆಯ ಬಳಿಗೆ ಹೋದರೆ ಮಹೇಶ್ ಅವರ ಕುಟುಂಬದವರು ಆವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಿದ್ದಾರೆ ಎಂದು ವಿನೂತ ದೂರಿದ್ದಾರೆ.