ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ನೀಡಿದೆ.
ಇಲ್ಲಿಯವರೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಯಾವುದೇ ಸರ್ಕಾರ ಸಚಿವರ ಸ್ಥಾನಮಾನವನ್ನು ನೀಡಿರಲಿಲ್ಲ. ಇದೇ ಮೊಟ್ಟಮೊದಲ ಬಾರಿಗೆ ಸರ್ಕಾರ ಕಸಪಾ ಅಧ್ಯಕ್ಷರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ನೀಡಿದೆ.
Advertisement
ಸಚಿವರ ದರ್ಜೆ ಸ್ಥಾನಮಾನ ನೀಡಿದ ಸಿಎಂ ಬೊಮ್ಮಾಯಿ ಅವರಿಗೆ ಸಮಗ್ರ ಕನ್ನಡಿಗರ ಪರವಾಗಿ ಗೌರವ ಕಾರ್ಯದರ್ಶಿ ನೇ. ಭ. ರಾಮಲಿಂಗಶೆಟ್ಟಿ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
Advertisement
Advertisement
ಹೇಳಿಕೆಯಲ್ಲಿ ಏನಿದೆ?
ಬಸವರಾಜ ಬೊಮ್ಮಾಯಿ ಅವರು ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಮೆ-ಗರಿಮೆ, ಇತಿಹಾಸವನ್ನು ಮನಗಂಡು, ನಾಡು-ನುಡಿಗೆ ಪರಿಷತ್ತು ಸಲ್ಲಿಸುತ್ತಿರುವ ಅನನ್ಯ ಸೇವೆಯನ್ನು ಪರಿಗಣಿಸಿ ಹಾಗೂ ಪರಿಷತ್ತಿನ ಚುನಾವಣೆ ಇತಿಹಾಸದಲ್ಲಿ ದಾಖಲೆಯನ್ನು ಸೃಷ್ಟಿಸಿದ ಮತ್ತು ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡುವ ಗುರಿಯನ್ನಿಟ್ಟುಕೊಂಡು, ಅನೇಕ ಕ್ರಾಂತಿಕಾರಿ ಬದಲಾವಣೆಯ ಮುಖೇನ ಪರಿಷತ್ತಿನ ಕಾರ್ಯಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರ ಕಾರ್ಯವೈಖರಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ತಕ್ಷಣದಿಂದ ಇಂದಿನಿಂದ ಜಾರಿಗೆ ಬರುವಂತೆ ರಾಜ್ಯ ಸಚಿವರ ದರ್ಜೆಗೆ ಸಮನಾದ ಸ್ಥಾನಮಾನವನ್ನು ನೀಡಿ ಗೌರವಿಸಿರುವುದು ಅತ್ಯಂತ ಸಂತಸದಾಯಕ ವಿಷಯವಾಗಿದೆ. ಇದನ್ನೂ ಓದಿ: ರಸ್ತೆಬದಿ ಕಟ್ಟಡ ಅಂಕುಶಕ್ಕೆ ನಿಯಮ: ಸಚಿವ ಸಿ.ಸಿ.ಪಾಟೀಲ್
Advertisement
ಕನ್ನಡ ಸಾಹಿತ್ಯ ಪರಿಷತ್ತಿಗೆ ಕನಿಷ್ಠ ಒಂದು ಕೋಟಿ ಸದಸ್ಯತ್ವದ ಗುರಿಯನ್ನು ಹೊಂದಿದ್ದು, ಜನಸಾಮಾನ್ಯರು ಪರಿಷತ್ತಿನ ಸದಸ್ಯರಾಗಬೇಕೆಂಬ ಸದುದ್ದೇಶದಿಂದ ಹಾಗೂ ಗ್ರಾಮಮಟ್ಟಕೆ ಪರಿಷತ್ತನ್ನು ಕೊಂಡೊಯ್ಯಬೇಕೆಂಬ ದೃಷ್ಟಿಯಿಂದ ಸದಸ್ಯತ್ವ ಶುಲ್ಕವನ್ನು 250 ರೂ. ಗಳಿಗೆ ಇಳಿಸಿ ಆನ್‌ಲೈನ್‌ನಲ್ಲೇ ನೋಂದಾಯಿಸಲು ಅತ್ಯಾಧುನಿಕ ತಂತ್ರಜ್ಞಾನದ ಆ್ಯಪ್ ಅನ್ನು ಪರಿಷತ್ತಿಗೆ ಅಳವಡಿಸಿಕೊಂಡಿರುವ, ವಿಶ್ವಾದ್ಯಂತ ಕನ್ನಡವನ್ನು ಒಗ್ಗೂಡಿಸಲು ಹೊರರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಹೊರದೇಶ ಘಟಕಗಳನ್ನು ಸ್ಥಾಪಿಸಲು ಕ್ರಮಕೈಗೊಂಡಿರುವ ಹಾಗೂ ಕನ್ನಡ ಶಾಲೆಗಳ ಪುನಶ್ಚೇತನ ಮಾಡುವ ನಿಟ್ಟಿನಲ್ಲಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವ ನಾಡೋಜ ಡಾ. ಮಹೇಶ ಜೋಶಿ ಅವರಿಗೆ ಸರ್ಕಾರ ನೀಡಿರುವ ರಾಜ್ಯ ಸಚಿವರ ದರ್ಜೆ ಸ್ಥಾನಮಾನದಿಂದಾಗಿ ಇನ್ನೂ ಹೆಚ್ಚಿನ ರೀತಿಯಲ್ಲಿ ಕನ್ನಡದ ಕೆಲಸಗಳನ್ನು ಮಾಡಲು ಶಕ್ತಿ ಬಂದಂತಾಗಿದೆ.
ಸರ್ಕಾರ ರಾಜ್ಯ ಸಚಿವರ ದರ್ಜೆ ಸ್ಥಾನಮಾನದ ಗೌರವ ನೀಡಿರುವುದು ಸಾಹಿತ್ಯ ಪರಿಷತ್ತಿನ ಎಲ್ಲ ಸದಸ್ಯರಿಗೆ ಸಲ್ಲಿಸಿರುವ ಸನ್ಮಾನವಾಗಿದೆ. ಈ ಮೂಲಕ ಮಾನ್ಯ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಸರ್ಕಾರ ಇಟ್ಟಿರುವ ಭರವಸೆ, ವಿಶ್ವಾಸವನ್ನು ಕಾಪಾಡಿಕೊಂಡು ಹೋಗುವ ಹಾಗೂ ಇನ್ನೂ ಹೆಚ್ಚಿನ ಜವಾಬ್ದಾರಿಯನ್ನು ಹೊತ್ತುಕೊಂಡು ಕನ್ನಡ-ಕನ್ನಡಿಗ-ಕರ್ನಾಟಕ ಇವುಗಳ ಹಿತರಕ್ಷಣೆ ಮತ್ತು ಅಭಿವೃದ್ಧಿಗೆ ಕಟಿಬದ್ಧನಾಗಿರುತ್ತೇನೆ ಎಂಬ ಭಾವನೆಯನ್ನು ಈ ಸುಸದಂರ್ಭದಲ್ಲಿ ಡಾ. ಮಹೇಶ ಜೋಶಿ ಅವರು ವ್ಯಕ್ತಪಡಿಸಿರುತ್ತಾರೆ.
ಕನ್ನಡಿಗರ ಒತ್ತಾಸೆಯಂತೆ, ಕನ್ನಡ ಸಾಹಿತ್ಯ ಪರಿಷತ್ತಿನಂತಹ ಘನ ಸಂಸ್ಥೆಯ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರಿಗೆ ರಾಜ್ಯ ಸಚಿವರ ದರ್ಜೆ ಸ್ಥಾನಮಾನ ನೀಡುವ ಮೂಲಕ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಪರಿಷತ್ತಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಿರುವುದಕ್ಕಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಎಲ್ಲ ಸದಸ್ಯರಾದಿಯಾಗಿ, ಜಿಲ್ಲಾ, ತಾಲ್ಲೂಕು, ಗಡಿರಾಜ್ಯ, ಹೋಬಳಿ ಘಟಕಗಳ ಕಾರ್ಯಕಾರಿ ಸಮಿತಿ ಸದಸ್ಯರ ಹಾಗೂ ಸಮಗ್ರ ಕನ್ನಡಿಗರ ಪರವಾಗಿ ಪರಿಷತ್ತು ಧನ್ಯವಾದಗಳನ್ನು ಸಲ್ಲಿಸುತ್ತದೆ.