ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತ ಪ್ರಮಾಣ ಸ್ವೀಕಾರ

Public TV
3 Min Read
Rekha Gupta 4

– ರಾಷ್ಟ್ರ ರಾಜಧಾನಿಯ 4ನೇ, ಬಿಜೆಪಿಯ 2ನೇ ಮಹಿಳಾ ಸಿಎಂ

ನವದೆಹಲಿ: ಪ್ರಥಮ ಬಾರಿ ಶಾಸಕಿಯಾಗಿ ಆಯ್ಕೆಯಾದ ರೇಖಾ ಗುಪ್ತ‌ (Rekha Gupta) ಅವರು ದೆಹಲಿಯ ನೂತನ ಮುಖ್ಯಮಂತ್ರಿಯಾಗಿ (Delhi cm) ಪ್ರಮಾಣ ವಚನ ಸ್ವೀಕರಿಸಿದರು.

ಐತಿಹಾಸಿಕ ರಾಮಲೀಲಾ ಮೈದಾನದಲ್ಲಿಂದು ನಡೆದ ಬೃಹತ್‌ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi), ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಸೇರಿದಂತೆ ಇತರ ಕೇಂದ್ರ ಸಚಿವರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ವಿ.ಕೆ ಸಕ್ಸೆನಾ (VK Saxena) ಪ್ರಮಾಣ ವಚನ ಬೋಧಿಸಿದರು. ಇದೇ ವೇಳೆ ಸಚಿವರಾಗಿ ಪರ್ವೇಶ್ ಸಾಹಿಬ್ ಸಿಂಗ್, ಆಶಿಶ್ ಸೂದ್, ಮಂಜಿಂದರ್ ಸಿಂಗ್ ಸಿರ್ಸಾ, ರವೀಂದರ್ ಇಂದ್ರಜ್ ಸಿಂಗ್, ಕಪಿಲ್ ಮಿಶ್ರಾ ಮತ್ತು ಪಂಕಜ್ ಕುಮಾರ್ ಸಿಂಗ್ ಅವರು ಪ್ರಮಾಣ ವಚನ ಸ್ವೀಕರಿಸಿದರು. ಇದನ್ನೂ ಓದಿ: ಮತ್ತೆ ಅಚ್ಚರಿ ನೀಡಿದ ಮೋದಿ, ಶಾ ಜೋಡಿ – ರೇಖಾ ಗುಪ್ತಾ ಆಯ್ಕೆ ಹಿಂದಿದೆ ಭಾರೀ ಲೆಕ್ಕಾಚಾರ

ಸಮಾರಂಭದಲ್ಲಿ ರಾಜನಾಥ್‌ ಸಿಂಗ್‌ ಸೇರಿದಂತೆ ಹಲವು ಕೇಂದ್ರ ಸಚಿವರು, ಚಂದ್ರಬಾಬು ನಾಯ್ಡು ಸೇರಿದಂತೆ ಎನ್‌ಡಿಎ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸಾವಿರಾರು ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು. ಸಮಾರಂಭಕ್ಕೂ ಮುನ್ನ ರಾಷ್ಟ್ರಗೀತೆಗೆ ಗೌರವ ಸಲ್ಲಿಸಲಾಯಿತು. ಇದನ್ನೂ ಓದಿ: ತ್ರಿವೇಣಿ ಸಂಗಮದಲ್ಲಿ ನೀರು ಕುಡಿಯೋಕೂ ಯೋಗ್ಯ: ಯೋಗಿ ಆದಿತ್ಯನಾಥ್

ರಾಜಧಾನಿಯ 4ನೇ ಮಹಿಳಾ ಸಿಎಂ:
ಈ ಹಿಂದೆ ದೆಹಲಿ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆಯಾಗಿದ್ದ ರೇಖಾ ಗುಪ್ತ, ಇದೀಗ ಮುಖ್ಯಮಂತ್ರಿಯಾಗಿ ಆಯ್ಕೆಯಾಗುವ ಮೂಲಕ ರಾಷ್ಟ್ರ ರಾಜಧಾನಿಯ 4ನೇ ಮಹಿಳಾ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ. ಈ ಹಿಂದೆ ಬಿಜೆಪಿಯಿಂದ ಸುಷ್ಮಾ ಸ್ವರಾಜ್‌, ಕಾಂಗ್ರೆಸ್‌ನಿಂದ ಶೀಲಾ ದೀಕ್ಷಿತ್‌ ಹಾಗೂ ಎಎಪಿಯಿಂದ ಅತಿಶಿ ದೆಹಲಿಯ ಮುಖ್ಯಮಂತ್ರಿಗಳಾಗಿದ್ದರು. ಇದೀಗ ರೇಖಾ ಗುಪ್ತಾ ಈ ಸ್ಥಾನ ಅಲಂಕರಿಸಿದ್ದು, ರಾಜಧಾನಿಯಲ್ಲಿ ಮಹಿಳೆಯರ ದರ್ಬಾರ್‌ ಮುಂದುವರಿಯಲಿದೆ. ಇದನ್ನೂ ಓದಿ: ಏಪ್ರಿಲ್‌ ಒಳಗೆ ಭಾರತದಲ್ಲಿ ಎಲೆಕ್ಟ್ರಿಕ್‌ ಕಾರು‌ ಬಿಡುಗಡೆಗೆ ಟೆಸ್ಲಾ ಪ್ಲ್ಯಾನ್‌ – ಆರಂಭಿಕ ಬೆಲೆ ಎಷ್ಟು?

rekha gupta

11 ದಿನಗಳ ಬಳಿಕ ಸಿಎಂ ಅಭ್ಯರ್ಥಿ ಘೋಷಣೆ:
ದೆಹಲಿ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬರೋಬ್ಬರಿ 11 ದಿನಗಳ ಬಳಿಕ ನೂತನ ಮುಖ್ಯಮಂತ್ರಿ ಹೆಸರನ್ನು ಬಿಜೆಪಿ ಪ್ರಕಟಿಸಿತು. ಪ್ರಥಮ ಬಾರಿ ಶಾಸಕಿ ರೇಖಾ ಗುಪ್ತ ಅವರೇ ರಾಷ್ಟ್ರ ರಾಜಧಾನಿಯ ನೂತನ ಸಿಎಂ ಎಂದು ಪಕ್ಷ ಘೋಷಣೆ ಮಾಡಿತು. ಅಲ್ಲದೇ ಮಾಜಿ ಸಿಎಂ ಪುತ್ರ ಪರ್ವೇಶ್‌ ವರ್ಮಾ ಅವರನ್ನ ಡಿಸಿಎಂ ಸ್ಥಾನಕ್ಕೆ ಬಿಜೆಪಿ ಆಯ್ಕೆ ಮಾಡಿತು. ಇದನ್ನೂ ಓದಿ: ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಅಧಿಕಾರ ಸ್ವೀಕಾರ

Share This Article