ಭಾರತದಲ್ಲಿ ಫಸ್ಟ್, ಕೊರೊನಾಗೆ ಎಚ್‍ಐವಿ ಡ್ರಗ್ಸ್ – ಇಟಲಿ ದಂಪತಿಯ ಆರೋಗ್ಯದಲ್ಲಿ ಭಾರೀ ಚೇತರಿಕೆ

Public TV
2 Min Read
Coronavirus 6

ಜೈಪುರ: ಕೊರೊನಾದಿಂದ ಬಳಲುತ್ತಿರುವ ಇಟಲಿ ದಂಪತಿಗೆ ಎಚ್‍ಐವಿ ನಿಯಂತ್ರಣಕ್ಕೆ ಬಳಕೆ ಮಾಡುವ ಎರಡು ಡ್ರಗ್ಸ್ ನೀಡಿದ್ದು ಆರೋಗ್ಯದಲ್ಲಿ ಭಾರೀ ಚೇತರಿಕೆ ಕಂಡುಬಂದಿದೆ.

ಭಾರತಕ್ಕೆ ಪ್ರವಾಸಕ್ಕೆ ಬಂದ ದಂಪತಿಗೆ ಜೈಪುರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ಪತಿಯ ಆರೋಗ್ಯ ಬಹಳ ಹದೆಗೆಟ್ಟಿತ್ತು. ಈ ಡ್ರಗ್ಸ್ ನೀಡಿದ ಬಳಿಕ ಆತನ ಆರೋಗ್ಯ ಸ್ಥಿತಿ ನಿಯಂತ್ರಣಕ್ಕೆ ಬಂದಿದ್ದು, ಪತ್ನಿಯ ಆರೋಗ್ಯ ಬಹಳಷ್ಟು ಸುಧಾರಿಸಿದೆ.

Corona Virus 6

ಎಚ್‍ಐವಿಗೆ ನೀಡಲಾಗುವ ಲೋಪಿನವೀರ್ ಮತ್ತು ರಿಟೋನವೀರ್ ಡ್ರಗ್ಸ್ ಅನ್ನು ಇಟಲಿ ದಂಪತಿಗೆ ನೀಡಲಾಗುತ್ತಿದೆ. ಈ ಸಂಬಂಧ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಪ್ರತಿಕ್ರಿಯಿಸಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಕೊರೊನಾ ಪೀಡಿತರಿಗೆ ಎರಡು ಎಚ್‍ಐವಿ ಡ್ರಗ್ಸ್ ನೀಡಲು ಅನುಮತಿ ನೀಡಿದೆ. ತುರ್ತು ಸಂದರ್ಭದಲ್ಲಿ ಕೊರೊನಾ ಪೀಡಿತರಿಗೆ ಈ ಡ್ರಗ್ಸ್ ನೀಡಲಾಗುತ್ತದೆ. ಜೈಪುರದಲ್ಲಿ ದಾಖಲಾಗಿರುವ ಇಬ್ಬರು ಇಟಲಿಯ ರೋಗಿಗಳಿಗೆ ಈ ಡ್ರಗ್ಸ್ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಆರೋಗ್ಯ ಅಧಿಕಾರಿಗಳು ಪ್ರತಿಕ್ರಿಯಿಸಿ, ಕೊರೊನಾ ಪೀಡಿತರಿಗೆ ಈ ಡ್ರಗ್ಸ್ ನೀಡುವುದು ಹೊಸದೆನಲ್ಲ. ಚೀನಾದಲ್ಲಿ ಈಗಾಗಲೇ ಬಳಕೆ ಮಾಡಲಾಗುತ್ತಿದೆ. ಈ ಡ್ರಗ್ಸ್ ನೀಡುವುದರಿಂದ ಕೆಲ ಸೈಡ್ ಎಫೆಕ್ಟ್ ಆಗುತ್ತದೆ. ಈಗಲೇ ಈ ಡ್ರಗ್ಸ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಹೇಳಲು ಬರುವುದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

corona china helmet 2

ಇಟಲಿ ದಂಪತಿಯ ಪೈಕಿ 69 ವರ್ಷದ ಪತಿಯ ಆರೋಗ್ಯ ಆಸ್ಪತ್ರೆಗೆ ದಾಖಲಾದಾಗ ಬಹಳ ಹದಗೆಟ್ಟಿತ್ತು. ಚಿಕಿತ್ಸೆಯ ನಂತರ ಆರೋಗ್ಯ ಸುಧಾರಣೆಯಾಗಿದ್ದು ಈಗ ಆ ವ್ಯಕ್ತಿ ಜ್ವರದಿಂದ ಬಳಲುತ್ತಿಲ್ಲ. ರಕ್ತದೊತ್ತಡ ಸಾಮಾನ್ಯವಾಗಿದೆ. ಈ ಪರಿಸ್ಥಿತಿಯಲ್ಲಿ ಆತನನ್ನು ಡಿಸ್ಚಾರ್ಜ್ ಮಾಡಬಹುದು. ಆದರೆ ಪೂರ್ಣವಾಗಿ ಗುಣಮುಖನಾದ ಬಳಿಕ ಬಿಡುಗಡೆ ಮಾಡಲಾಗುವುದು. ಆತನ ಪತ್ನಿಯ ಆರೋಗ್ಯ ಗಮನಾರ್ಹವಾಗಿ ಚೇತರಿಕೆ ಕಂಡಿದೆ ಎಂದು  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಎಚ್‍ಐವಿ ನಿಯಂತ್ರಿಸಲು ಬಳಸಲಾಗುತ್ತಿರುವ ಈ ಎರಡು ಡ್ರಗ್ಸ್ ಅನ್ನು ಎಲ್ಲ ಕೊರೊನಾ ಪೀಡಿತರಿಗೆ ನೀಡುವಂತಿಲ್ಲ. ಭಾರತದಲ್ಲಿ ಶೇ.70 ರಷ್ಟು ಎಚ್‍ಐವಿ ಪೀಡಿತರಿಗೆ ಮೊದಲ ಸಾಲಿನ ಔಷಧಿಗಳನ್ನು ನೀಡಲಾಗುತ್ತಿದೆ. ಭಾರತದಲ್ಲಿ ತಯಾರಾಗುವ ಈ ಎರಡನೇ ಸಾಲಿನ ಔಷಧಿಯನ್ನು ರಫ್ತು ಮಾಡಲಾಗುತ್ತದೆ. ವಿಶೇಷವಾಗಿ ಆಫ್ರಿಕಾ ದೇಶಗಳಿಗೆ ರಫ್ತು ಆಗುತ್ತದೆ. ಭಾರತದಲ್ಲಿ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಇರುವ ಸಂದರ್ಭದಲ್ಲಿ ಲೋಪಿನವೀರ್ ಮತ್ತು ರಿಟೋನವೀರ್ ಬಳಕೆ ಅನುಮತಿ ನೀಡಲಾಗಿದೆ. ಈ ಡ್ರಗ್ಸ್ ಬಳಕೆಗೆ ಪ್ರತ್ಯೇಕ ಮಾರ್ಗಸೂಚಿಗಳನ್ನು ನಿಗದಿ ಮಾಡಲಾಗಿದೆ.

Corona Virus 3

ಕೊರೊನಾಗೆ ಇಲ್ಲಿಯವರೆಗೆ ಯಾರು ಔಷಧಿ ಕಂಡು ಹಿಡಿದಿಲ್ಲ. ವಿಶ್ವದ ಹಲವು ಪ್ರಯೋಗಾಲಯದಲ್ಲಿ ಔಷಧಿ ಕಂಡು ಹಿಡಿಯಲು ವಿಜ್ಞಾನಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿದರೆ ಗುಣವಾಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ವಿವಿಧ ದೇಶಗಳಲ್ಲಿ ಕೊರೊನಾ ಪೀಡಿತರಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಡ್ರಗ್ಸ್ ನೀಡಲಾಗುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *