ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದ ಕರ್ನಾಟಕ ಸಂಸದರು

Public TV
1 Min Read
Sadananda gowda

ನವದೆಹಲಿ: 17ನೇ ಲೋಕಸಭೆಯ ಮೊಟ್ಟ ಮೊದಲ ಅಧಿವೇಶನ ಆರಂಭವಾಗಿದ್ದು, ಲೋಕಸಭಾ ಚುನಾವಣೆಯಲ್ಲಿ ಆಯ್ಕೆ ಆಗಿರುವ 542 ಮಂದಿ ಸದಸ್ಯರು ಸದನದ ಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಕರ್ನಾಟಕದಿಂದ ಆಯ್ಕೆ ಆಗಿರುವ ಸಂಸದರಾದ ಸದಾನಂದ ಗೌಡ, ಸುರೇಶ್ ಅಂಗಡಿ ಅವರು ಕನ್ನಡದಲ್ಲೇ ಸಂಸತ್ ಸದಸ್ಯರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಈ ವೇಳೆ ಇತರೇ ಸಂಸದರು ಮೇಜು ಕುಟ್ಟಿ ಸ್ವಾಗತ ಮಾಡಿದರು.

ಕಳೆದ ಲೋಕಸಭೆಯಲ್ಲಿ ಅನಂತ್ ಕುಮಾರ್ ನಿರ್ವಹಿಸುತ್ತಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನೇ ಸದಾನಂದ ಗೌಡರಿಗೆ ನೀಡಲಾಗಿದೆ. ಇಂದು ಡಿವಿಎಸ್ ಅವರು 4ನೇಯವರಾಗಿ ಕನ್ನಡದಲ್ಲೇ ಪ್ರಮಾಣ ವಚನ ಸ್ವೀಕರಿಸಿದರು. ಇದರೊಂದಿಗೆ 12ನೇಯವರಾಗಿ ಸಂಸರಾದ ಪ್ರಹ್ಲಾದ್ ಜೋಶಿ ಅವರು ಕೂಡ ಕನ್ನಡಲ್ಲೇ ಪ್ರಮಾಣ ವಚನ ಸ್ವೀಕರಿಸಿದರು.

ಲೋಕಸಭೆಯಲ್ಲಿ ಆಡಳಿತ ಪಕ್ಷದ ನಾಯಕರಾಗಿರುವ ಪ್ರಧಾನಿ ನರೇಂದ್ರ ಮೋದಿ ಮೊದಲಿಗರಾಗಿ ಪ್ರಮಾಣವಚನ ಸ್ವೀಕರಿಸಿದ್ದು, ಮಧ್ಯಪ್ರದೇಶದ ಸಾಗರ್ ಕ್ಷೇತ್ರದ ಸಂಸದ ವೀರೇಂದ್ರ ಕುಮಾರ್ ಹಂಗಾಮಿ ಸ್ಪೀಕರ್ ಆಗಿದ್ದು ಹೊಸ ಸದಸ್ಯರಿಗೆ ಪ್ರಮಾಣವಚನ ಬೋಧಿಸಿದರು. ಪ್ರಧಾನಿ ಮೋದಿ ಬಳಿಕ ರಾಜ್‍ನಾಥ್ ಸಿಂಗ್, ನಿತಿನ್ ಗಡ್ಕರಿ ಅವರು ಪ್ರಮಾಣ ವಚನ ಸ್ವೀಕರಿಸಿದರು.

542 ಸಂಸದರಲ್ಲಿ 267 ಮಂದಿ ಲೋಕಸಭೆಗೆ ಹೊಸ ಸದಸ್ಯರಾಗಿದ್ದು, ಅತೀ ದೊಡ್ಡ ಪಕ್ಷವಾಗಿರುವ ಬಿಜೆಪಿ 303 ಸದಸ್ಯ ಬಲದ ಪ್ರಚಂಡ ಬಹುಮತ ಹೊಂದಿದೆ. ಆದರೆ ಕಳೆದ ಬಾರಿಯಂತೆ ಈ ಬಾರಿಯೂ ಲೋಕಸಭೆಯಲ್ಲಿ ಯಾವುದೇ ಅಧಿಕೃತ ವಿಪಕ್ಷವಿಲ್ಲ. ಕಾಂಗ್ರೆಸ್ 52 ಸಂಸದರನ್ನು ಹೊಂದಿದ್ದರೂ ಅಧಿಕೃತ ವಿಪಕ್ಷ ಸ್ಥಾನಕ್ಕೆ 55 ಸ್ಥಾನಗಳು ಅಗತ್ಯವಿದೆ. ಉಳಿದಂತೆ ಡಿಎಂಕೆ -23, ಟಿಎಂಸಿ -22, ಜೆಡಿಯು – 16, ಬಿಎಸ್‍ಪಿ -10, ವೈಎಸ್‍ಆರ್‍ಪಿ -22, ಶಿವಸೇನೆ -18, ಬಿಜೆಡಿ – 12, ಟಿಆರ್‍ಎಸ್ -9, ಎಲ್‍ಜೆಪಿ – 6 ಸಂಸದರನ್ನು ಹೊಂದಿದೆ. ಪಕ್ಷೇತರ ಸಂಸದೆಯಾಗಿ ಆಯ್ಕೆ ಇತಿಹಾಸ ನಿರ್ಮಿಸಿರುವ ಮಂಡ್ಯ ಸಂಸದೆ ಸುಮಲತಾ ನಾಳೆ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *