ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕರು, ನಿರ್ದೇಶಕರ ಆದಿಯಾಗಿ ಚಿತ್ರತಂಡ ಮತ್ತು ಸಿನಿಮಾ ಪತ್ರಕರ್ತರೊಂದಿಗೆ ಸಂಪರ್ಕಕೊಂಡಿಯಾಗಿ ಕಳೆದ 5 ದಶಕಗಳಿಂದ ಕೆಲಸ ಮಾಡುತ್ತಿರುವ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಹಲವು ಚಿತ್ರಗಳನ್ನು ನಿರ್ಮಾಣದಲ್ಲಿಯೂ ಗುರುತಿಸಿಕೊಂಡು ಚಿತ್ರರಂಗಕ್ಕೆ ತನ್ನದೇ ಆದ ವಿಶಿಷ್ಟ ಕೊಡುಗೆ ಮತ್ತು ಸೇವೆ ನೀಡಿದೆ. ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸ್ಥಾಪಕರಾದ ಡಿ.ವಿ ಸುಧೀಂದ್ರ (DV Sudheendra) ಅವರು ಕನ್ನಡ ಚಿತ್ರರಂಗದ ಅಗ್ರ ಸಿನಿಮಾ ಪ್ರಚಾರಕರ್ತರು. ಜೊತೆಗೆ ತಮ್ಮದೇ ಸಂಸ್ಥೆಯಿಂದ ಒಲವಿನ ಉಡುಗೊರೆ, ಗಣೇಶನ ಮದುವೆ, ಗುಂಡನ ಮದುವೆ, ಪಟ್ಟಣಕ್ಕೆ ಬಂದ ಪುಟ್ಟ, ನಗು ನಗುತಾ ನಲಿ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.
ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಮುನ್ನೆಡೆಸುತ್ತಿರುವ ಹಿರಿಯ ಸಿನಿಮಾ ಪ್ರಚಾರಕರ್ತ ಸುಧೀಂದ್ರ ವೆಂಕಟೇಶ್ ಈಗ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ತಮ್ಮ ಪುತ್ರ ಪವನ್ ವೆಂಕಟೇಶ್ ಆಕ್ಷನ್ ಕಟ್ ಹೇಳಿರುವ ‘ಫಸ್ಟ್ ಸ್ಯಾಲರಿ’ ಕಿರುಚಿತ್ರಕ್ಕೆ (First Salary Short Film) ಬಂಡವಾಳ ಹಾಕಿದ್ದಾರೆ. ಶೀರ್ಷಿಕೆ ಕೆಳಗೆ ಕನಸುಗಳ ಹಾದಿ ಎನ್ನುವ ಅಡಿಬರಹವಿದೆ. ಡಿ.ವಿ ಸುಧೀಂದ್ರ ಅವರ ಆಶೀರ್ವಾದವಿದೆ. ಫಸ್ಟ್ ಸ್ಯಾಲರಿ ಕಿರುಚಿತ್ರದ ಪೋಸ್ಟರ್ ದೀಪಾವಳಿ ಸಂದರ್ಭದಲ್ಲಿ ಬಿಡುಗಡೆಯಾಗಿದೆ.
ಕೊರೊನಾ ಸಮಯದಲ್ಲಿ ʻಕರಾಳ ರೋಗ ನಾಶʼ ಎಂಬ ಕಿರುಚಿತ್ರ ಸೇರಿದಂತೆ ಅನೇಕ ಕಿರುಚಿತ್ರಗಳನ್ನು ನಿರ್ದೇಶನ ಮಾಡಿ ಅನುಭವ ಹೊಂದಿರುವ ಪವನ್ ವೆಂಕಟೇಶ್, ಈಗ ಫಸ್ಟ್ ಸ್ಯಾಲರಿ ಎಂಬ ಕಿರುಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಕಿರುಚಿತ್ರದಲ್ಲಿ ಹಿರಿಯ ಕಲಾವಿದರಾದ ಹರಿಣಿ ಶ್ರೀಕಾಂತ್ ಪ್ರಮುಖಪಾತ್ರದಲ್ಲಿ ಕಾಣಿಸಿಕೊಂಡಿದ್ದು ವಿಜಯ್ ಶಿವಕುಮಾರ್, ಯತಿರಾಜ್, ತ್ರಿಶೂಲ್, ಸ್ನೇಹಶ್ರೀ ಮತ್ತು ರಕ್ಷಿತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀರಾಘವೇಂದ್ರ ಚಿತ್ರವಾಣಿ ಯೂಟೂಬ್ನಲ್ಲೇ ಈ ಕಿರುಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ.
ಕೊರೊನಾ ಸೋಂಕಿನ ಸಮಯದಲ್ಲಿ ಕೊರೊನಾ ಕರಾಳ ನಾಶ ಕಿರುಚಿತ್ರ ಮಾಡಿದ್ದೆ, ಇದರ ಜೊತೆ ಕನ್ನಡದ ಅಗ್ರಗಣ್ಯ ಸಿನಿಮಾ ಪ್ರಚಾರಕರ್ತ ದಿ ಡಿ.ವಿ ಸುಧೀಂದ್ರ ಅವರ ಬದುಕಿನ ಕುರಿತಾದ ಡಿ.ವಿ ಸುಧೀಂದ್ರ ಸಿನಿ ಪಯಣ ಸಾಕ್ಷ್ಯಚಿತ್ರ ಹಾಗೂ ಆನಿಮೇಷನ್‌ನಲ್ಲಿ ʻರಾಮ ಜನ್ಮಭೂಮಿʼ ಕಿರುಚಿತ್ರ ನಿರ್ದೇಶನ ಮಾಡಿದ್ದೆ, ಈಗ ಫಸ್ಟ್ ಸ್ಯಾಲರಿ ಕಿರುಚಿತ್ರ ಮಾಡಿದ್ದೇನೆ. ನೋಡುಗರಿಗೆ ಬೇಕಾದ ಎಲ್ಲಾ ಕಮರ್ಷಿಯಲ್ ಅಂಶ ಇದೆ. ಇದು ತಾಯಿಯ ಸೆಂಟಿಮೆಂಟ್ ಆಧರಿಸಿದ ಕಿರುಚಿತ್ರ. ಐದು ದಿನಗಳ ಕಾಲ ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಹೆಚ್ಚು ಕಡಿಮೆ ಒಂದು ತಿಂಗಳು ಆಗಿದೆ. ಕಿರುಚಿತ್ರದಲ್ಲಿ 1 ಹಾಡಿದೆ, ಡಿಐ ಸೇರಿದಂತೆ ಒಟ್ಟಾರೆ ಕಿರುಚಿತ್ರದ ತಯಾರಿಕೆಗೆ 2 ರಿಂದ ಮೂರು ತಿಂಗಳು ಹಿಡಿದಿದೆ . ಫಸ್ಟ್ ಸ್ಯಾಲರಿ ಕಿರುಚಿತ್ರ ಒಟ್ಟಾರೆ 24 ನಿಮಿಷದ ಅವಧಿ ಇದೆ.
ನಿರ್ದೇಶನ ತಂಡದಲ್ಲಿ ಮನೋಜ್ ಕುಮಾರ್ ಎಚ್.ಎನ್. ರವಿ ಸಾಸನೂರು ಕೆಲಸ ಮಾಡಿದ್ದು ಪ್ರಚಾರ ಕಲೆ ಮಣಿ ಅವರದು. ವಿಜಯ್ ಶಿವಕುಮಾರ್ ರಚನೆ, ರಿಚರ್ಡ್ ಡ್ಯಾನಿಯಲ್ ಛಾಯಾಗ್ರಾಹಣದ ಜೊತೆಗೆ ಸಂಕಲನ ಮಾಡಿದ್ದು ವಿಜಯ್ ಹರಿತ್ಸ ಸಂಗೀತ ನೀಡಿದ್ಧಾರೆ. ಡಿ.ಎಸ್ ಸುನೀಲ್ ಸುಧೀಂದ್ರ ಮತ್ತು ಡಿ.ಜಿ ವಾಸುದೇವ್ ಪತ್ರಿಕಾ ಸಂಪರ್ಕವಿದ್ದು ಡಿಜಿಟಲ್ ಮಾರ್ಕೆಟಿಂಗ್ನಲ್ಲಿ ಚಂದನ ಪ್ರಸನ್ನ ಕಾರ್ಯನಿರ್ವಹಿಸಿದ್ದಾರೆ ಎಂದು ನಿರ್ದೇಶಕ ಪವನ್ ವೆಂಕಟೇಶ್ ಫಸ್ಟ್ ಸ್ಯಾಲರಿ ಬಗ್ಗೆ ಮಾಹಿತಿ ನೀಡಿದ್ದಾರೆ.