ಉಡುಪಿ: ಜಿಲ್ಲೆಯಲ್ಲಿ ಮೊದಲ ವರ್ಷಧಾರೆಯಾಗಿದೆ. ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಉಡುಪಿ ಜಿಲ್ಲೆಯ ಕಾರ್ಕಳದ ಜನ ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ.
ಕಾರ್ಕಳ ತಾಲೂಕಿನಲ್ಲಿ ವರ್ಷದ ಮೊದಲ ಮಳೆಯಾಗಿದೆ. ತಾಲೂಕಿನ ಅಲ್ಲಲ್ಲಿ ಭಾರೀ ಮಳೆಯಾಗಿದ್ದು, ಕೆಲವೆಡೆ ಗುಡುಗು ಸಹಿತ ಮಳೆಯಾಗಿದೆ. ಜೋಡು ರಸ್ತೆ, ಬಜಗೋಳಿ ಸಮೀಪ ಆಲಿಕಲ್ಲು ಮಳೆಯಾಗಿದೆ. ಕೆಲವೆಡೆ ದೊಡ್ಡ ದೊಡ್ಡ ನೀರಿನ ಹನಿಗಳು ಬಿದ್ದಿದ್ದು, ಆಲಿಕಲ್ಲು ಮಳೆಯೂ ಆಗಿದೆ. ಬಿರು ಬಿಸಿಲಿನಿಂದ ಹೈರಾಣಾಗಿದ್ದ ಜನತೆಗೆ ಸ್ವಲ್ಪ ತಂಪಾಗಿದೆ.
ಧಾರಾಕಾರ ಮಳೆಯಿಂದ ವಾತಾವರಣದಲ್ಲಿ ಬದಲಾವಣೆಯಾಗಿದೆ. ಕುಕ್ಕುಂದೂರು, ಜೋಡುರಸ್ತೆ ಅಜೆಕಾರು, ಬಜಗೋಳಿಯಲ್ಲಿ ಮಳೆಯಾಗಿದ್ದು, ಹೆಬ್ರಿ ತಾಲೂಕು ಆಸುಪಾಸಿನಲ್ಲೂ ಅಲ್ಲಲ್ಲಿ ಮಳೆಯಾಗಿದೆ. ಪ್ರತಿ ವರ್ಷ ಕಾರ್ಕಳದ ಮೂಲಕವೇ ಉಡುಪಿ ಜಿಲ್ಲೆಗೆ ಮಳೆ ಎಂಟ್ರಿ ಕೊಡುತ್ತದೆ. ಈ ಬಾರಿಯೂ ಅದೇ ರೀತಿ ಆಗಿದೆ.
ಉಡುಪಿಯ ಕುಡಿಯುವ ನೀರಿನ ಆಸರೆ ಸ್ವರ್ಣಾ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಿತ್ತು. ಮಳೆ ಮುಂದುವರಿದರೆ ನೀರಿನ ಅಭಾವ ಕಡಿಮೆಯಾಗಬಹುದು ಎಂದು ಸ್ಥಳೀಯ ನಿವಾಸಿಗಳು ಅಭಿಪ್ರಾಯಿಸುತ್ತಿದ್ದಾರೆ.