ವಿರೋಧದ ನಡುವೆಯೂ ಕಾವೇರಿ ಪ್ರಾಧಿಕಾರದ ಸಭೆ

Public TV
2 Min Read
KRS 3

ಬೆಂಗಳೂರು: ಕರ್ನಾಟಕದ ವಿರೋಧದ ನಡುವೆಯೂ ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೊದಲ ಸಭೆ ನಡೆಯಲಿದ್ದು, ತಮಿಳುನಾಡಿಗೆ ಜುಲೈ ತಿಂಗಳಲ್ಲಿ ಬೇಕಾಗಿರುವ ನೀರು ಬಿಡುಗಡೆ ಸಂಬಂಧ ಕಾವೇರಿ ನೀರು ನಿಯಂತ್ರಣ ಸಮಿತಿಗೆ ನಿರ್ದೇಶನಗಳನ್ನು ನೀಡಲಿದೆ. ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾದ ಬಳಿಕ ಮೊದಲ ಬಾರಿ ನವದೆಹಲಿಯ ಶ್ರಮ ಶಕ್ತಿ ಭವನದಲ್ಲಿ ಎಲ್ಲ ಸದಸ್ಯರು ಸಭೆ ಸೇರಲಿದ್ದಾರೆ.

ದೆಹಲಿಯ ಶ್ರಮ ಶಕ್ತಿ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ಕೇಂದ್ರ ಜಲ ಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಮಸೂದ್ ಹುಸೈನ್ ಅಧ್ಯಕ್ಷತೆಯಲ್ಲಿ ಆರಂಭವಾಗೋ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿಯ ಪ್ರತಿನಿಧಿಗಳು ಭಾಗವಹಿಸ್ತಾರೆ. ಕರ್ನಾಟಕದ ಪರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಪಾಲ್ಗೊಳ್ಳಲಿದ್ದಾರೆ.

KRS DAM 1

ಶನಿವಾರ ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದಿದ್ದ ಸರ್ವಪಕ್ಷ ಸಭೆಯಲ್ಲಿ ಪ್ರಾಧಿಕಾರ ರಚನೆ ಸ್ವರೂಪ ಪ್ರಶ್ನಿಸಿ ಸುಪ್ರೀಂಕೋರ್ಟ್‍ಗೆ ಅರ್ಜಿ ಹಾಕಲು ನಿರ್ಧರಿಸಲಾಗಿತ್ತು. ಕಾವೇರಿ ಕೊಳ್ಳದಲ್ಲಿ ಮುಂಗಾರು ಮಳೆಯಿಂದಾಗಿ ಬಹುತೇಕ ಡ್ಯಾಂ ಗಳು ಭರ್ತಿ ಹಂತಕ್ಕೆ ಬಂದಿವೆ. ಈ ಸಂಬಂಧ ಚರ್ಚೆ ನಡೆಯಲಿದ್ದು, ತಮಿಳುನಾಡಿಗೆ ಜುಲೈ ಬಳಿಕ ಬಿಡಬೇಕಾದ ನೀರಿನ ಪ್ರಮಾಣ ಕುರಿತು ಚರ್ಚೆ ನಡೆಯಲಿದೆ.

ಪ್ರಾಧಿಕಾರದ ಸಭೆಯಲ್ಲಿ ಏನೆಲ್ಲಾ ಚರ್ಚೆ ಆಗಬಹುದು..?
1. ಜುಲೈನಲ್ಲಿ ಕರ್ನಾಟಕದಿಂದ ಬಿಡುಗಡೆಯಾಗಬೇಕಿರುವ ನೀರಿನ ಪ್ರಮಾಣದ ಬಗ್ಗೆ ನಿಯಂತ್ರಣ ಸಮಿತಿಗೆ ನಿರ್ದೇಶನ.
2. ಪ್ರತಿ 10 ದಿನಕ್ಕೊಮ್ಮೆ ತಿಂಗಳಲ್ಲಿ 3 ಬಾರಿ ಕರ್ನಾಟಕದಿಂದ ಬಿಡಬೇಕಿರುವ ನೀರಿನ ಪ್ರಮಾಣದ ಬಗ್ಗೆ ಮಾರ್ಗಸೂಚಿ.
3. ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ಜುಲೈನಲ್ಲಿ ಹರಿಯಬೇಕಿರುವ ನೀರು 34 ಟಿಎಂಸಿ.
4. ಕಾವೇರಿಕೊಳ್ಳದ ಡ್ಯಾಂಗಳಲ್ಲಿರುವ ನೀರಿನ ಸಂಗ್ರಹ, ಒಳಹರಿವಿನ ಪ್ರಮಾಣದ ಮಾಹಿತಿ ಪ್ರಸ್ತಾಪ.
5. ನಾಲ್ಕು ರಾಜ್ಯಗಳಲ್ಲಿ ಜೂನ್ 1ರಿಂದ ಜೂನ್ 30ರವರೆಗಿನ ಮಳೆಯ ಪ್ರಮಾಣದ ಬಗ್ಗೆ ಅಂಕಿ ಅಂಶ.
6. ಒಳಹರಿವು, ಹೊರಹರಿವು, ಡ್ಯಾಂಗಳಲ್ಲಿ ಸಂಗ್ರಹ, ಮಳೆ ಪ್ರಮಾಣ, ಬೇಸಾಯ ಪ್ರದೇಶ.
7. ಗೃಹ ಬಳಕೆ ಮತ್ತು ಕೈಗಾರಿಕೆ ಬಳಕೆಗೆ ಬೇಕಾಗಿರುವ ನೀರಿನ ಪ್ರಮಾಣದ ಮಾಹಿತಿ ಸಂಗ್ರಹದ ಸ್ವರೂಪದ ಬಗ್ಗೆ ನಿರ್ಧಾರ.
8. ಡ್ಯಾಂಗಳಿಂದ ನಾಲೆಗಳಿಗೆ ಇನ್ನೂ ನೀರು ಬಿಟ್ಟಿಲ್ಲ, ಎಷ್ಟು ನೀರು ಬಿಡಬೇಕೆಂಬ ಬಗ್ಗೆ ಚರ್ಚೆ.
9. ಕರ್ನಾಟಕ ಹೆಚ್ಚುವರಿ ನೀರನ್ನಷ್ಟೇ ಬಿಟ್ಟಿದೆ, ತನಗೆ ಬರಬೇಕಿದ್ದ ಪಾಲನ್ನು ಬಿಟ್ಟಿಲ್ಲ.
10. ಹೀಗಾಗಿ ತಕ್ಷಣವೇ ತನ್ನ ಪಾಲಿನ ನೀರು ಬಿಡುವಂತೆ ತಮಿಳುನಾಡು ವಾದ ಸಾಧ್ಯತೆ.
11. ಪ್ರಾಧಿಕಾರ ರಚನೆಯಲ್ಲಾದ ಲೋಪದ ಬಗ್ಗೆ ಕರ್ನಾಟಕದಿಂದ ವಾದ ಸಾಧ್ಯತೆ.

Share This Article
Leave a Comment

Leave a Reply

Your email address will not be published. Required fields are marked *