ಶಿವಮೊಗ್ಗ: ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ (Shivamogga Airport) ಮೊದಲ ವಿಮಾನ ಗುರುವಾರ ಆಗಮಿಸಿದೆ. ಬೆಂಗಳೂರಿನಿಂದ (Bengaluru) ಶಿವಮೊಗ್ಗಕ್ಕೆ ತೆರಳಿದ ಇಂಡಿಗೋ ವಿಮಾನದಲ್ಲಿ ಮಾಜಿ ಸಿಎಂ ಯಡಿಯೂರಪ್ಪ (BS Yediyurappa), ಸಚಿವ ಎಂಬಿ ಪಾಟೀಲ್ (MB Patil) ಜೊತೆ ಆ ಭಾಗದ ಜನ ಪ್ರತಿನಿಧಿಗಳು ಪ್ರಯಾಣಿಸಿದ್ದರು.
ಶಿವಮೊಗ್ಗದ ವಿಮಾನ ನಿಲ್ದಾಣದಿಂದ ಇಂದಿನಿಂದ ಪ್ರಯಾಣ ಆರಂಭವಾಗಿದೆ. ಶಿವಮೊಗ್ಗದಲ್ಲಿ ಇಳಿದ ಮೊದಲ ವಿಮಾನಕ್ಕೆ ವಾಟರ್ ಸೆಲ್ಯೂಟ್ ಮೂಲಕ ಸ್ವಾಗತ ಮಾಡಲಾಯಿತು. ವಿಮಾನದಲ್ಲಿ ಆಗಮಿಸಿದ ಗಣ್ಯರನ್ನು ಸಚಿವ ಮಧು ಬಂಗಾರಪ್ಪ ಹಾಗೂ ಜಿಲ್ಲಾಧಿಕಾರಿ ಡಾ.ಆರ್ ಸೆಲ್ವಮಣಿ ಸ್ವಾಗತಿಸಿದರು.
ವಿಮಾನದಲ್ಲಿ ಪ್ರಯಾಣಿಸುವುದಕ್ಕೂ ಮೊದಲು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಿಎಂ ಯಡಿಯೂರಪ್ಪ, ನಮ್ಮ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರೈತರು ಕಾರಣ. ಸಣ್ಣ ಸಮಸ್ಯೆ ಇಲ್ಲದೇ ಜಮೀನು ಬಿಟ್ಟುಕೊಟ್ಟಿದ್ದಾರೆ. ಇವತ್ತು ನನ್ನ ಜೊತೆ ಕೆಲ ರೈತರನ್ನೂ ವಿಮಾನದಲ್ಲಿ ಕರೆದುಕೊಂಡು ಹೋಗುತ್ತಿದ್ದೇನೆ. ವಿಮಾನ ನಿಲ್ದಾಣದಿಂದ ಕೈಗಾರಿಕೆ, ಬೇರೆ ಕಾರಣಕ್ಕೂ ಅನುಕೂಲ ಆಗಲಿದೆ. ಮುಂದೆ ಓಡಾಡಲು ಬಹಳ ಅನುಕೂಲ ಆಗಲಿದೆ. ಏರ್‌ಪೋರ್ಟ್ ಆಗಲು ಕಾರಣರಾದ ಎಲ್ಲರಿಗೂ ಅಭಿನಂದನೆಗಳು. ಸಂಸದ ರಾಘವೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸಿಎಂ ಆಗಿದ್ದಾಗಿನ ಕನಸು ನನಸಾಗಿರುವುದು ಬಹಳ ಸಂತೋಷ ತಂದಿದೆ ಎಂದು ಹೇಳಿದರು.
ಈ ಬಗ್ಗೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ಎಂಬಿ ಪಾಟೀಲ್, ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟ ಮೊಟ್ಟ ಮೊದಲ ಇಂಡಿಗೋ ವಿಮಾನದ ಮೂಲಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಶಿವಮೊಗ್ಗ ಸಂಸದರಾದ ಬಿವೈ ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಬಿವೈ ವಿಜಯೇಂದ್ರ, ಗೋಪಾಲ ಕೃಷ್ಣ ಬೇಲೂರು, ಮಾಜಿ ಸಚಿವ ಕೆಎಸ್ ಈಶ್ವರಪ್ಪ, ಹಾಲಪ್ಪ, ಭಾರತಿ ಶೆಟ್ಟಿ ಸೇರಿದಂತೆ ಹಲವರು ನಮ್ಮೊಂದಿಗೆ ಪ್ರಯಾಣ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸುಧಾರಿಸಿದ ಹೆಚ್‌ಡಿಕೆ ಆರೋಗ್ಯ – ಐಸಿಯುನಿಂದ ವಾರ್ಡ್‌ಗೆ ಶಿಫ್ಟ್
ಶಿವಮೊಗ್ಗದ ನಗರದಿಂದ 10 ಕಿ.ಮೀ ದೂರದಲ್ಲಿರುವ ಸೋಗಾನೆ ಬಳಿ ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದೆ. ಈ ವರ್ಷದ ಫೆಬ್ರವರಿ 27 ರಂದು ಯಡಿಯೂರಪ್ಪ ಅವರ ಹುಟ್ಟು ಹಬ್ಬದ ದಿನದಂದೇ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಿಲ್ದಾಣವನ್ನು ಉದ್ಘಾಟಿಸಿದ್ದರು. ಇಂದಿನಿಂದ ವಿಮಾನ ಹಾರಾಟಕ್ಕೆ ಅಧಿಕೃತ ಚಾಲನೆ ದೊರಕಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ರೈಲಿಗೆ ಬೆಂಕಿ ಆಕಸ್ಮಿಕ ಅಲ್ಲ, ಮಾನವ ಕೃತ್ಯದ ಶಂಕೆ
Web Stories