ಶಿವಮೊಗ್ಗ: ಮೊದಲು ನಮ್ಮ ಗ್ರಾಮದ ಸೇತುವೆ, ರಸ್ತೆ ದುರಸ್ತಿ ಮಾಡಿ ಆಮೇಲೆ ನಿಮ್ಮ ಕಾಲುವೆ ದುರಸ್ತಿ ಮಾಡಿ ಎಂದು ಆಗ್ರಹಿಸಿ ಕಾಲುವೆ ಕಾಮಗಾರಿಯನ್ನು ಗ್ರಾಮಸ್ಥರು ನಿಲ್ಲಿಸಿದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕರಿಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಡೆದಿದೆ.
ಇಲ್ಲಿನ ಸಾವೇಹಕ್ಲು ಜಲಾಶಯದಿಂದ ಲಿಂಗನಮಕ್ಕಿ ಜಲಾಶಯಕ್ಕೆ ನೀರು ಹರಿಸುವ ಕಾಲುವೆಯ ದುರಸ್ತಿ ಕಾಮಗಾರಿಯನ್ನು ಕೆಪಿಸಿ ನಿರ್ವಹಿಸುತ್ತಿದೆ. ಬುಧವಾರ ಕಾಮಗಾರಿ ಆರಂಭವಾಗುತ್ತಿದ್ದಂತೆ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಜಮಾವಣೆಯಾದ ಸ್ಥಳೀಯರು ಕಾಮಗಾರಿ ನಡೆಸದಂತೆ ತಾಕೀತು ಮಾಡಿದರು. ಅಲ್ಲದೇ ಕಾಮಗಾರಿ ನಡೆಸುವುದಕ್ಕೆ ಗ್ರಾಮಸ್ಥರು ಅವಕಾಶ ಕೊಡದೆ ನಿಲ್ಲಿಸಿದರು.
Advertisement
Advertisement
ಈ ಸುದ್ದಿ ತಿಳಿಯುತ್ತಿದ್ದಂತೆ ಕರಿಮನೆ ಗ್ರಾಮಪಂಚಾಯ್ತಿಗೆ ಭೇಟಿ ನೀಡಿದ ಕೆಪಿಸಿ ಅಧಿಕಾರಿಗಳು, ಪಂಚಾಯ್ತಿ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು. ಕಾಲುವೆಯಿಂದ ನೀರು ಹರಿಸುತ್ತಿರುವ ಕಾರಣ ಮಳಲಿ ಸೇತುವೆ ಸಂಪೂರ್ಣ ಶಿಥಿಲಗೊಂಡಿದೆ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಜನರು ಓಡಾಡದ ಸ್ಥಿತಿ ನಿರ್ಮಾಣವಾಗಿದೆ. ಆದರೆ ಕಾಲುವೆ ದುರಸ್ತಿ ಕಾಮಗಾರಿಯನ್ನು ವರ್ಷಂಪ್ರತಿ ಮಾಡುತ್ತಿದ್ದೀರಿ. ಸೇತುವೆ ಮತ್ತು ರಸ್ತೆ ಅಭಿವೃದ್ಧಿ ಮಾಡುವವರೆಗೆ ಕಾಲುವೆ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಆಗ್ರಹಿಸಿದರು.
Advertisement
ಈ ವೇಳೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಗ್ರಾಮಸ್ಥರು, ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.