ನವದೆಹಲಿ: ಭಾರತೀಯ ಸೇನೆಯವು ಸಾಮಾನ್ಯವಾಗಿ ಜರ್ಮನ್ ಶೆಪರ್ಡ್, ಲ್ಯಾಬಡಾರ್ ಮತ್ತು ಗ್ರೇಟ್ ಸ್ವಿಸ್ ಮೌಂಟನ್‍ನಂತಹ ವಿದೇಶಿ ತಳಿಗಳ ಶ್ವಾನಗಳನ್ನು ಮಾತ್ರ ಸೇರ್ಪಡಿಸಿಕೊಳ್ಳುತ್ತವೆ. ಆದರೆ ಈಗ ಮೊದಲ ಬಾರಿ ಕರ್ನಾಟಕದ ಹೆಸರಾಂತ ಮುಧೋಳ ಶ್ವಾನ ತಳಿಗಳನ್ನು ಭಾರತೀಯ ಸೇನೆಗೆ ಸೇರಿಸಲು ಮುಂದಾಗುತ್ತಿದೆ.
ಉತ್ತರ ಪ್ರದೇಶದ ಮೀರತ್‍ನಲ್ಲಿರುವ ಆರ್ಮಿ ರಿಮೌಂಟ್ ಅಂಡ್ ವೆಟರಿನರಿ ಕಾಪ್ರ್ಸ್ (ಆರ್‍ವಿಸಿ) ಕೇಂದ್ರದಲ್ಲಿ ಈಗಾಗಲೇ ದೇಶೀಯ 6 ಮುಧೋಳ ಶ್ವಾನಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ವರ್ಷದ ಅಂತ್ಯದಲ್ಲಿ ಮುಧೋಳ ನಾಯಿಗಳನ್ನು ಭಯೋತ್ಪಾದಕರು ಹೆಚ್ಚಾಗಿರುವ ಜಮ್ಮು ಮತ್ತು ಕಾಶ್ಮೀರಕ್ಕೆ ಸೇನಾ ಕರ್ತವ್ಯ ನಿರ್ವಹಿಸಲು ಕಳುಹಿಸಲಾಗುತ್ತದೆ ಎಂದು ಸೇನಾ ಮೂಲಗಳು ತಿಳಿಸಿವೆ.
Advertisement
Advertisement
ಭಾರತದ ಕಳೆದ ವರ್ಷ ಕರ್ನಾಟಕದಿಂದ ಆರ್‍ವಿಸಿ ಕೇಂದ್ರಕ್ಕೆ ಈ ಆರು ಮುಧೋಳ ಶ್ವಾನಗಳನ್ನು ತರಬೇತಿಗಾಗಿ ಕಳುಹಿಸಿತ್ತು. ಕೇಂದ್ರದಲ್ಲಿ ಕಠಿಣವಾದ ತರಬೇತಿಯನ್ನು ನೀಡಲಾಗಿದೆ. ಮುಖ್ಯವಾಗಿ ತರಬೇತಿದಾರರು ಪ್ರಾಣಿಗಳು ನಡವಳಿಕೆ ಮತ್ತು ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ನಾಯಿಗಳು ಹಾಗೂ ತರಬೇತಿದಾರರು ನಡುವಿನ ಬಾಂಧವ್ಯವನ್ನು ಬೆಸೆಯಲಾಯಿತು ಎಂದು ತರಬೇತಿ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದ್ದಾರೆ.
Advertisement
ವರ್ಷದಲ್ಲಿ ಎರಡು ಬಾರಿ ಮರಿ ಹಾಕುವುದರಿಂದ ಜೂನ್ ಹಾಗೂ ನವೆಂಬರ್ ತಿಂಗಳಲ್ಲಿ ಸಾಕಷ್ಟು ನಾಯಿಗಳು ಸಿಗುತ್ತವೆ. ಮುಧೋಳ ನಾಯಿಗಳಿಗೆ ಕರ್ನಾಟಕದಲ್ಲಿ ಮಾತ್ರವಲ್ಲದೆ ಮಹಾರಾಷ್ಟ್ರ, ಉತ್ತರ ಪ್ರದೇಶ, ಗುಜರಾತ್, ಹರಿಯಾಣ, ದೆಹಲಿ, ರಾಜಸ್ಥಾನಗಳಲ್ಲಿಯೂ ಸಾಕಷ್ಟು ಬೇಡಿಕೆಯಿದೆ.
Advertisement
ಈ ಹಿಂದೆ ಮುಧೋಳ ಶ್ವಾನ ಪಡೆ ಮೊದಲ ಬಾರಿಗೆ ದೇಶದ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಹೆಜ್ಜೆ ಹಾಕಿತ್ತು. ದೇಶೀಯ ಶ್ವಾನತಳಿಯೊಂದನ್ನು ಸೇನೆಗೆ ಸೇರ್ಪಡೆ ಮಾಡಿಕೊಳ್ಳುತ್ತಿರುವುದು ಭಾರತದ ಸೇನಾ ಇತಿಹಾಸದಲ್ಲಿ ಇದೇ ಮೊದಲು. ಅದರಲ್ಲಿಯೂ ಕರ್ನಾಟಕದ ಶ್ವಾನತಳಿಗೆ ಈ ಅವಕಾಶ ದೊರೆತಿರುವುದು ವಿಶೇಷವಾಗಿದೆ.
ಮುಧೋಳ ಇತಿಹಾಸ: ಸುಮಾರು ಕ್ರಿ.ಪೂ. 500 ರಲ್ಲಿ ಈ ನಾಯಿ ಕರ್ನಾಟಕದವರಿಗೆ ಪರಿಚಯವಾಗಿತ್ತು. ಮಧ್ಯ ಏಷ್ಯಾ ಹಾಗೂ ಅರೇಬಿಯದಿಂದ ಭಾರತಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಹಲಗಲಿ ಬೇಡರು ತಮ್ಮ ಬೇಟೆಗಾಗಿ ಈ ನಾಯಿಯನ್ನು ಇಟ್ಟುಕೊಂಡಿದ್ದರು ಎಂದು ಹೇಳಲಾಗುತ್ತಿದೆ.
ಮುಧೋಳದ ರಾಜ ಮಾಲೋಜಿರಾವ್ ಘೋರ್ಪಡೆ ಈ ನಾಯಿ ನೋಡಿ ತನ್ನ ಆಸ್ತಿ ಕಾಯುವುದಕ್ಕೆ ನೇಮಿಸಿಕೊಂಡಿದ್ದ. ನಂತರ 1900 ರಲ್ಲಿ ಇಂಗ್ಲೆಂಡ್ ದೊರೆ ಜಾರ್ಜ್‍ಗೆ ಉಡುಗೊರೆಯಾಗಿ ಕೊಟ್ಟಿದ್ದರು. ಇದರಿಂದ ಈ ನಾಯಿ ತಳಿ ಅಂದಿನಿಂದಲೂ ಹೆಚ್ಚು ಪ್ರಸಿದ್ಧಿ ಪಡೆದಿದೆ. ಛತ್ರಪತಿ ಶಿವಾಜಿ ಸೈನ್ಯದಲ್ಲಿಯೂ ಈ ನಾಯಿ ಇತ್ತು. ಅಂದು `ಸಮರವೀರ’ ನಾಯಿ ಎಂದು ಕರೆಯುತ್ತಿದ್ದರು. ಬಾಗಲಕೋಟೆಯ ಮುಧೋಳದಲ್ಲಿ ಈ ನಾಯಿಯನ್ನು ಹೆಚ್ಚಾಗಿ ಸಾಕುತ್ತಿದ್ದ ಹಿನ್ನೆಲೆಯಲ್ಲಿ ನಾಯಿಗೆ `ಮುಧೋಳ’ ಅಂತ ಹೆಸರು ಬಂದಿದೆ. ಬ್ರಿಟಿಷರು `ಕ್ಯಾರವಾನ್’ ಎಂಬುದಾಗಿ ಕರೆಯುತ್ತಿದ್ದರು.
ನಾಯಿಯ ವಿಶೇಷತೆ ಏನು?
ಕಣ್ಣುಗಳು ತೀಕ್ಷ್ಣವಾಗಿರುವ ಈ ನಾಯಿಗೆ ಇದಕ್ಕೆ ಕನ್ನಡ, ಮರಾಠಿ ಭಾಷೆ ಅರ್ಥವಾಗುತ್ತದೆ. ಮನುಷ್ಯರಿಗಿಂತ ಬೇಗ ಭಾಷೆಯನ್ನು ಅರ್ಥಮಾಡಿಕೊಳ್ಳುವ ಗ್ರಹಣ ಶಕ್ತಿ ಇರುವುದು ಇದರ ವಿಶೇಷತೆ. ಇವುಗಳ ಮುಖ್ಯ ಗುಣ ಬೇಟೆಯಾಡುವುದು. ಚೆಲ್ಲಾಟವಾಡುವುದಿಲ್ಲ, ಗಂಭೀರವಾಗಿರುತ್ತದೆ. ಮಾಲೀಕನ ಆಜ್ಞೆಗಾಗಿ ಮಾಲೀಕನನ್ನೇ ಸೂಕ್ಷ್ಮವಾಗಿ ಗಮನಿಸುತ್ತಿರುತ್ತವೆ.
ಸಾಧಾರಣವಾಗಿ 22 ಕೆ.ಜಿಯಿಂದ 28 ಕೆಜಿ ತೂಕ ಇರುವ ಮುಧೋಳದ ಓಟವು ಅತಿ ವೈಶಿಷ್ಠತೆಯಿಂದ ಕೂಡಿದ್ದು, ಓಡುವುದಕ್ಕಿಂತ ಹಾರುತ್ತಿರುವ ಹಾಗೆ ಕಾಣುತ್ತದೆ. ಇದನ್ನು ಮೀರಿಸುವ ನಾಯಿಗಳೇ ಇಲ್ಲ ಎನ್ನುವ ಮಾತುಗಳು ಇವೆ.
ಮುಧೋಳ ನಾಯಿಗಳಿಗೆ ಎಷ್ಟು ನಿಯತ್ತು ಇದೆ ಎಂದರೆ ಮಾಲೀಕನ ಆಜ್ಞೆಯಿಲ್ಲದೇ ಒಂದು ತುತ್ತನ್ನೂ ತಿನ್ನುವುದಿಲ್ಲ. ಈ ತಳಿಯ ನಾಯಿಗಳ ಆಯಸ್ಸು ಸುಮಾರು 13, 14 ವರ್ಷ. ಒಟ್ಟು 18 ತಿಂಗಳಲ್ಲಿ ಈ ನಾಯಿ ಪೂರ್ಣ ಬೆಳವಣಿಗೆ ಕಾಣುತ್ತದೆ. ನಾಯಿಯ ಒಟ್ಟು ಮೈಕಟ್ಟು 1.8 ರಿಂದ 2.3 ಅಡಿಗಳಷ್ಟು ಇರುತ್ತದೆ.
ಮುಧೋಳ ನಾಯಿಗೆ ಸಾಮಾನ್ಯವಾಗಿ ಯಾವ ಆರೋಗ್ಯದ ಸಮಸ್ಯೆ ಬರುವುದಿಲ್ಲ. ಭಾರತದ ಯಾವುದೇ ಮೂಲೆಯ ಹವಾಮಾನಕ್ಕೆ ಹೊಂದಿಕೊಳ್ಳುವುವುದು ಇದರ ಮತ್ತೊಂದು ವಿಶೇಷತೆ. ಇದು ಏನಾದರೂ ಹುಡುಕಬೇಕಾದ್ರೆ ಕಣ್ಣಿಂದ ನೋಡಿ ಹುಡುಕುತ್ತೆ. ಇದರ ಕಣ್ಣು ಬಹಳ ಚುರುಕಾಗಿದ್ದು, ಒಂದು ಚಿಕ್ಕ ಪ್ರಾಣಿಯೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತನ್ನ ಹಿಂದೆ ಇರುವ ಪ್ರಾಣಿಗಳು ಸಹ ಕಾಣಿಸುತ್ತದೆ. ಇದಕ್ಕೆ ಸುಮಾರು 270 ಡಿಗ್ರಿ ದೃಷ್ಟಿ ಇದೆ ಎಂದು ಶ್ವಾನ ಪ್ರಿಯರು ಹೇಳುತ್ತಾರೆ.