ಹುಬ್ಬಳ್ಳಿ: ಪೋಷಕರೇ ನಿಮ್ಮ ಮಕ್ಕಳ ಕೈಗೆ ಮೊಬೈಲ್ ನೀಡೋ ಮುನ್ನ ಎಚ್ಚರ. ರಾಜ್ಯಕ್ಕೂ ಕಾಲಿಟ್ಟಿದೆ ವಿಶ್ವಾದ್ಯಂತ ಹಲವು ಜೀವಗಳನ್ನ ಬಲಿ ಪಡೆದ ಡೆಡ್ಲಿ ಬ್ಲೂವೇಲ್ ಗೇಮ್.
ಹೌದು. ಬ್ಲೂವೇಲ್ ಗೇಮ್ ಆಡುತ್ತಾ 11 ವರ್ಷದ ಪೋರಿ ಬೆರಳು ಕುಯ್ದುಕೊಂಡ ಘಟನೆ ಹುಬ್ಬಳ್ಳಿಯ ರಾಜನಗರದಲ್ಲಿ ನಡೆದಿದೆ. ಮನೆಯಲ್ಲಿ ಬೆರಳು ಕುಯ್ದುಕೊಂಡ ವಿದ್ಯಾರ್ಥಿನಿ ಹಾಗೆಯೇ ಶಾಲೆಗೆ ಬಂದಿದ್ದಾಳೆ. ಇದನ್ನು ಗಮನಿಸಿದ ವಿದ್ಯಾರ್ಥಿನಿಯ ಗೆಳೆಯರು ಶಾಲಾ ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಕೂಡಲೇ ಆ ವಿದ್ಯಾರ್ಥಿನಿಯನ್ನು ಕರೆಸಿ ಕೌನ್ಸಿಲಿಂಗ್ ನಡೆಸಿದಾಗ, ತಾನು ಮನೆಯಲ್ಲಿ ಬ್ಲೂವೇಲ್ ಗೇಮ್ ಆಡುತ್ತಾ ಬೆರಳು ಕುಯ್ದುಕೊಂಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಈ ಬಗ್ಗೆ ಹೆಚ್ಚು ಮಾತನಾಡದೇ ಆ ಬಾಲಕಿಯನ್ನು ಶಿಕ್ಷಕರು ಕಳಿಸಿಕೊಟ್ಟಿದ್ರು. ಬಳಿಕ ಪೋಷಕರನ್ನು ಕರೆಸಿ ಬ್ಲೂವೇಲ್ ಗೇಮ್ ಅವಾಂತರಗಳ ಬಗ್ಗೆ ಮಾಹಿತಿ ನೀಡಿದ ಶಿಕ್ಷಕರು, ಆ ಡೆಡ್ಲಿ ಗೇಮ್ ಆನ್ ಇನ್‍ಸ್ಟಾಲ್ ಮಾಡಿಸಿದ್ರು. ಗಣೇಶನ ಹಬ್ಬ ಮುಗಿದ ನಂತರ ಪೋಷಕರ ಸಭೆ ಕರೆಯಲು ನಿರ್ಧರಿಸಿರುವ ಶಾಲೆಯ ಪ್ರಾಂಸುಪಾಲರು, ಬ್ಲೂವೇಲ್ ಗೇಮ್ ಬಗ್ಗೆ ಜಾಗೃತಿ ಮೂಡಿಸಲು ತೀರ್ಮಾನಿಸಿದ್ದಾರೆ.
ಏನಿದು ಬ್ಲೂವೇಲ್ ಗೇಮ್?: ರಷ್ಯಾ ಮೂಲದ ಈ ಡೆಡ್ಲಿ ಗೇಮ್ ಇತ್ತೀಚಿಗಷ್ಟೇ ದೇಶದಲ್ಲಿ ಸದ್ದು ಮಾಡ್ತಿದೆ. ಮುಂಬೈ, ಕೊಲ್ಕತ್ತಾ ಸೇರಿದಂತೆ ಹಲವೆಡೆ ಮಕ್ಕಳನ್ನ ಬಲಿ ಪಡೆದಿದೆ. ಬ್ಲೂವೇಲ್ ಆಟದಲ್ಲಿ ಆಟಗಾರನಿಗೆ ಪ್ರತಿದಿನ ಒಂದೊಂದು ಟಾಸ್ಕ್ ಗಳನ್ನು ನೀಡಲಾಗುತ್ತದೆ. ಟಾಸ್ಕ್ ಪೂರ್ಣಗೊಳಿಸಿದ ಬಳಿಕ ಆತ ಅದರ ಚಿತ್ರಗಳನ್ನು ಅಪ್ಲೋಡ್ ಮಾಡಬೇಕು. 50ನೇ ದಿನ ಅಂತಿಮ ಟಾಸ್ಕ್ ಆಗಿ ಆತ್ಮಹತ್ಯೆ ಮಾಡಿಕೊಳ್ಳುವ ಟಾಸ್ಕ್ ನೀಡಲಾಗುತ್ತದೆ. ಇದರಿಂದ ಪ್ರಚೋದಿತರಾಗಿ ಆಟಗಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ.