ರಾಜ್ಯ ಬಿಜೆಪಿಯ ಮೊದಲ ರಾಜ್ಯಾಧ್ಯಕ್ಷ ಎ.ಕೆ.ಸುಬ್ಬಯ್ಯ ನಿಧನ

Public TV
2 Min Read
ak subbaiaha

ಬೆಂಗಳೂರು: ಹಿರಿಯ ರಾಜಕಾರಣಿ ಮತ್ತು ಹೋರಾಟಗಾರ, ರಾಜ್ಯ ಬಿಜೆಪಿಯ ಮೊದಲ ರಾಜ್ಯಾಧ್ಯಕ್ಷ ಎ.ಕೆ.ಸುಬ್ಬಯ್ಯ(85) ವಯೋಸಹಜ ಕಾಯಿಲೆಯಿಂದ ವಿಧಿವಶರಾಗಿದ್ದಾರೆ.

ಎ.ಕೆ.ಸುಬ್ಬಯ್ಯ ಅವರು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಮಧ್ಯಾಹ್ನ ಸುಮಾರು 2.47ಕ್ಕೆ ನಿಧನರಾಗಿದ್ದಾರೆ. ಎ.ಕೆ.ಸುಬ್ಬಯ್ಯ ಅವರು ಕಿಡ್ನಿಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದರು. ಕೆಲವು ದಿನಗಳ ಹಿಂದೆ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

180129 ak subbaiah

ಆರ್.ಟಿ ನಗರ ನಿವಾಸಕ್ಕೆ ಪಾರ್ಥಿವ ಶರೀರವನ್ನು ರವಾನೆ ಮಾಡಲಾಗಿದ್ದು, ನಿವಾಸದ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಕೊಡಗಿನ ಸ್ವಗ್ರಾಮಕ್ಕೆ ಪಾರ್ಥಿವ ಶರೀರವನ್ನು ರವಾನೆ ಮಾಡಲಿದ್ದು, ಸಂಜೆ ಸ್ವಗ್ರಾಮದಲ್ಲೇ ಅಂತ್ಯಸಂಸ್ಕಾರ ಮಾಡಲಾಗುತ್ತದೆ ಎಂದು ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.

ಎ.ಕೆ.ಸುಬ್ಬಯ್ಯ ಅವರು ಮೂಲತಃ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬೆಳ್ಳೂರು ಗ್ರಾಮದವರಾಗಿದ್ದು, ಕರ್ನಾಟಕ ಹೈಕೋರ್ಟ್ ವಕೀಲರಾಗಿದ್ದರು. ಸುಬ್ಬಯ್ಯ ಅವರು 1988 ಮತ್ತು 1994 ರ ನಡುವೆ ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕಾಂಗ್ರೆಸ್ ಸೇರುವ ಮೊದಲು ಬಿಜೆಪಿಯ ಮೊದಲ ಕರ್ನಾಟಕ ರಾಜ್ಯ ಅಧ್ಯಕ್ಷರಾಗಿದ್ದರು. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕರ್ನಾಟಕದಲ್ಲಿ ಸ್ಥಾನ ಪಡೆಯುವ ಉದ್ದೇಶದಿಂದ 1980 ರಲ್ಲಿ ಎ.ಕೆ.ಸುಬ್ಬಯ್ಯ ಅವರು ಲಾಲ್‍ಬಾಗ್ ಸಿಲ್ವರ್ ಜುಬಿಲಿ ಹಾಲ್‍ನಲ್ಲಿ ಬಿಜೆಪಿ ರಾಜ್ಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಯುವ ಆರ್‍ಎಸ್‍ಎಸ್ ಕಾರ್ಯಕರ್ತರು ಬಿಜೆಪಿಗೆ ಸೇರಲು ಮತ್ತು ಕರ್ನಾಟಕದಲ್ಲಿ ಪಕ್ಷಕ್ಕಾಗಿ ಕೆಲಸ ಮಾಡಿದ ಕೀರ್ತಿ ಎ.ಕೆ ಸುಬ್ಬಯ್ಯ ಅವರಿಗೆ ಸಲ್ಲುತ್ತದೆ. ಸುಬ್ಬಯ್ಯ ಅವರ ನಾಯಕತ್ವದಲ್ಲಿ 1983 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ 110 ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿತ್ತು.

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು “ದೈವಾದಿನರಾದ ಹಿರಿಯ ನಾಯಕ ಎ.ಕೆ. ಸುಬ್ಬಯ್ಯನವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ಭಗವಂತ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಜನಸಂಘದಿಂದ ಬಂದು ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ನಂತರ ಹಲವಾರು ಸಮಾಜಮುಖಿ ಹೋರಾಟಗಳಲ್ಲಿ ಭಾಗಿಯಾಗಿರುವ ಎ.ಕೆ. ಸುಬ್ಬಯ್ಯನವರು ಅಗಲಿರುವ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಅವರು ನನ್ನ ಆತ್ಮೀಯ ಸ್ನೇಹಿತರಾಗಿದ್ದು, ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನನ್ನ ಜೊತೆ ಸೆರೆಮನೆ ವಾಸವನ್ನು ಅನುಭವಿಸಿದ್ದರು” ಎಂದು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *