ಬೆಂಗಳೂರು: ಕೊರೋನಾ (Corona Virus) ಬಳಿಕ ಅದ್ಧೂರಿ ದೀಪಾವಳಿಯ ಮೂಡ್‍ನಲ್ಲಿದ್ದ ಜನರಿಗೆ ಪಟಾಕಿ (Crackers) ದರ ಭರ್ಜರಿ ಶಾಕ್ ನೀಡಿದೆ. ಪಟಾಕಿ ಕೊಳ್ಳೋಕೆ ಅಂತಾ ಅಂಗಡಿಗೆ ಹೋದರೆ ಜೇಬಿಗೆ ಬೆಂಕಿ ಕಿಡಿ ಬಿದ್ದಂತಾಗಿದೆ.
ದೇಶದಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಕಳೆದ 2 ವರ್ಷದಿಂದ ಕಳೆಗುಂದಿದ್ದ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಇದರ ನಡುವೆ ಈ ಬಾರಿಯಾದರೂ ಅದ್ಧೂರಿ ಹಬ್ಬದ ಜೊತೆಗೆ ಪಟಾಕಿ ಹೊಡೆಯಬಹುದೆಂಬ ಖುಷಿಯಲ್ಲಿ ತಯಾರಿ ನಡೆಸಿದ್ದವರಿಗೆ ದರ ಏರಿಕೆ ಶಾಕ್ ಎದುರಾಗಿದೆ. ಇದನ್ನೂ ಓದಿ: ಊರಿಗೆ ಹೋಗಲಾರದೇ ಮೂಡಿತ್ತು ಬೇಸರ- ಕಾಲೇಜು ಕ್ಯಾಂಪಸ್‍ನಲ್ಲೇ ದೀಪಾವಳಿ ಸಡಗರ
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ ಈ ಬಾರಿ ಪಟಾಕಿ ದರ (Crackers Price) ತುಂಬಾನೇ ಕಾಸ್ಟ್ಲಿಯಾಗಿದೆ. ಕಾರಣ ಕಚ್ಚಾ ವಸ್ತುಗಳ ಬೆಲೆ ಏರಿಕೆ. ಇದರ ಜೊತೆಗೆ ಟ್ರಾನ್ಸ್ ಪೋರ್ಟ್ ಚಾರ್ಜ್ ಹೆಚ್ಚಳ, ಜಿಎಸ್‍ಟಿ ಸೇರಿದಂತೆ ಹಲವು ಕಾರಣಗಳು ದರ ಹೆಚ್ಚಳಕ್ಕೆ ಕಾರಣವಾಗಿದೆ. ಸದ್ಯ ಈ ಬಾರಿ ಹಬ್ಬದ ಮೇಲೆ ಪ್ರಭಾವ ಬೀರಿದ್ದು ಕಳೆದ ವರ್ಷದ ದರ ಮತ್ತು ಈ ವರ್ಷದ ದರಕ್ಕೆ ಸಾಕಷ್ಟು ವ್ಯತ್ಯಾಸವಿದೆ. ಕಳೆದ ಬಾರಿಗಿಂತ ಈ ಬಾರಿ ಬರೊಬ್ಬರಿ 40 ಶೇಕಡಾದಷ್ಟು ದರ ಏರಿಕೆಯಾಗಿದೆ.
ಪಟಾಕಿ ದರ ಕೈ ಸುಡುತ್ತಿದ್ದರೂ ಕೆಲವರು ಬಿಂದಾಸ್ ಆಗಿ ಹಬ್ಬ ಆಚರಿಸಲು ಪ್ಲಾನ್ ಮಾಡಿದ್ದಾರೆ. 2 ವರ್ಷದ ಬಳಿಕ ಹಬ್ಬ ಮಾಡುತ್ತಿರುವ ಹಿನ್ನೆಲೆ ಬೆಲೆ ಬಗ್ಗೆ ಹೆಚ್ಚು ಗಮನ ಕೊಡ್ತಿಲ್ಲ. ಸದ್ಯ ಸ್ವಲ್ಪ ಹಣ ಹೆಚ್ಚಾದರೂ ಪರವಾಗಿಲ್ಲ ಸಂಭ್ರಮದಿಂದ ಹಬ್ಬ ಮಾಡೋಣ ಎಂದು ಕೆಲ ಗ್ರಾಹಕರು ಹೇಳುತ್ತಾರೆ.
ಒಟ್ಟಾರೆ ಎಲ್ಲಾ ವಸ್ತುಗಳಂತೆ ಪಟಾಕಿ ದರ ಕಳೆದ ಬಾರಿಗಿಂತ ಹೆಚ್ಚಾಗೇ ಇದೆ. ಇದರ ಜೊತೆಗೆ ಜನ ಕೂಡ ಹಬ್ಬದ ಕಾರಣ ದರ ಏರಿಕೆಗೆ ಅಡ್ಜೆಸ್ಟ್ ಆದಂತೆ ಕಾಣುತ್ತಿದೆ.