ಮೈಸೂರು: ಗಾಯಗೊಂಡಿದ್ದ ನಾಗರ ಹಾವಿನ ಮರಿಗೆ ಮೈಸೂರಿನ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಸ್ನೇಕ್ ಕೆಂಪರಾಜು ಅವರು ಚಿಕಿತ್ಸೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ಬನ್ನಿಮಂಟಪ ಬಳಿ ವಾಹನ ಹರಿದು ನಾಗರ ಹಾವಿನ ಮರಿ ಗಾಯಗೊಂಡಿತ್ತು. ಇದನ್ನು ಗಮನಿಸಿದ ಸ್ನೇಕ್ ಕೆಂಪರಾಜು ಅವರು ನಾಗರ ಮರಿಯನ್ನು ರಕ್ಷಿಸಿದ್ದರು. ವಾಹನ ಹರಿದ ಪರಿಣಾಮ ಹಾವಿನ ಬೆನ್ನು ಮೂಳೆಗೆ ಗಾಯವಾಗಿತ್ತು. ಹೀಗಾಗಿ ಹಾವು ಮುಂದೆ ಹೋಗಲು ಸಾಧ್ಯವಾಗದೇ ಪರದಾಡುತ್ತಿತ್ತು.
ಆಗ ಪಶು ವೈದ್ಯರ ಮಾರ್ಗದರ್ಶನದೊಂದಿಗೆ ಸ್ನೇಕ್ ಕೆಂಪರಾಜು ಅವರು ಹಾವಿಗೆ ಔಷಧಿ ಹಾಕಿ, ಬ್ಯಾಂಡೇಜ್ ಕಟ್ಟಿ ಚಿಕಿತ್ಸೆ ನೀಡುವ ಮೂಲಕ ಒಂದು ಪುಟ್ಟ ಜೀವವನ್ನು ಉಳಿಸಿದ್ದಾರೆ.
ಕೆಂಪರಾಜು ಅವರು ಹಾವಿಗೆ ಚಿಕಿತ್ಸೆ ನೀಡಿ ಬಳಿಕ ಅದನ್ನು ಸುರಕ್ಷಿತ ಪ್ರದೇಶಕ್ಕೆ ಬಿಟ್ಟು ಬಂದಿದ್ದಾರೆ. ಈಗಿನ ಕಾಲದಲ್ಲಿ ಮನುಷ್ಯ ಸಾಯುತ್ತಿದ್ದರೆ ಸಹಾಯಕ್ಕೆ ಮುಂದೆ ಬಾರದ ಜನರ ಮಧ್ಯೆ ಪುಟ್ಟ ಹಾವಿನ ಮರಿಯನ್ನು ರಕ್ಷಿಸಿ ಉರಗ ಪ್ರೇಮ ಮೆರೆದಿರುವ ಕೆಂಪರಾಜು ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
https://www.youtube.com/watch?v=6zmwUI78LMk