ಪಾಟ್ನಾ: ಪಟಾಕಿ ಸ್ಫೋಟಗೊಂಡ ಹಿನ್ನೆಲೆ 6 ಮಂದಿ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿರುವ ಘಟನೆ ಬಿಹಾರದ ಸರನ್ ಜಿಲ್ಲೆಯ ಖುದಾಯಿ ಬಾಗ್ ಗ್ರಾಮದಲ್ಲಿ ಉದ್ಯಮಿಯೊಬ್ಬರ ಮನೆಯಲ್ಲಿ ನಡೆದಿದೆ.
ನಗರದ ಉದ್ಯಮಿ ಶಬೀರ್ ಹುಸೇನ್ ಅವರ ಮನೆಯಲ್ಲಿ ಸ್ಫೋಟ ಸಂಭವಿಸಿದೆ. ಮನೆಯ ಒಂದು ಭಾಗ ಸ್ಫೋಟಗೊಂಡಿದ್ದು, ಉಳಿದ ಭಾಗಕ್ಕೆ ಬೆಂಕಿ ಹೊತ್ತಿಕೊಂಡಿದೆ. ಮನೆ ನದಿಯ ತಟದಲ್ಲಿದ್ದು, ಸ್ಫೋಟದಿಂದಾಗಿ ಮನೆಯ ಬಹುತೇಕ ಭಾಗ ಕುಸಿದು ಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಬಿಗಿ ಭದ್ರತೆಯಲ್ಲಿ ನಡೆದ ಮೊದಲ ಅಗ್ನಿಪಥ್ ಏರ್ಫೋರ್ಸ್ ನೇಮಕಾತಿ ಪರೀಕ್ಷೆ
ಭಾರೀ ಸಂಖ್ಯೆಯ ಪಟಾಕಿಗಳನ್ನು ಮನೆಯೊಳಗೆ ಇಡಲಾಗಿತ್ತು. ಅದು ಸ್ಫೋಟಿಸಲು ಪ್ರಾರಂಭವಾದಾಗಿನಿಂದ ಸುಮಾರು 1 ಗಂಟೆಯವರೆಗೆ ನಿರಂತರವಾಗಿ ಸಿಡಿದಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮುಂದಿನ ಗುರಿ 90 ಮೀ. ಎಸೆತ – ಪದಕದ ಬಣ್ಣ ಬದಲಾಯಿಸಲು ಪ್ರಯತ್ನಿಸುತ್ತೇನೆ: ನೀರಜ್ ಚೋಪ್ರಾ
ಪಟಾಕಿ ಸಿಡಿದು ಮನೆ ಕುಸಿತವಾಗಿದ್ದರಿಂದ 6 ಮಂದಿ ಸಾವನ್ನಪ್ಪಿದ್ದಾರೆ. ಅವಶೇಷಗಳಡಿ ಸಿಲುಕಿರುವವರನ್ನು ರಕ್ಷಿಸುವ ಪ್ರಯತ್ನ ಮಾಡಲಾಗುತ್ತಿದೆ. ಗಾಯಗೊಂಡಿರುವ 8 ಜನರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಫೋಟದ ಹಿಂದಿನ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ. ವಿಧಿವಿಜ್ಞಾನ ತಂಡ ಹಾಗೂ ಬಾಂಬ್ ನಿಷ್ಕ್ರಿಯ ದಳವನ್ನೂ ಕರೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.