ಬೆಂಗಳೂರು: ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಎಲೆಕ್ಟ್ರಿಕ್ ಬೈಕ್ ಶೋರೂಂ (Electric Showroom) ಒಂದರಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, (Fire Accident) 70 ಬೈಕ್‌ಗಳು ಭಸ್ಮವಾಗಿವೆ.
ಶುಕ್ರ ಎಲೆಕ್ಟ್ರಿಕ್ ಬೈಕ್ ಶೋರೂಂನಲ್ಲಿ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ತಗುಲಿ 10 ನಿಮಿಷದಲ್ಲಿ ಕಟ್ಟಡದ ತುಂಬಾ ಬೆಂಕಿ ಅವರಿಸಿದೆ. ನೋಡನೋಡುತ್ತಿದ್ದಂತೆ ಸುಮಾರು 70 ಬೈಕ್‌ಗಳು ಸುಟ್ಟು ಕರಕಲಾಗಿವೆ. ಬೆಂಕಿ ಕಟ್ಟಡಕ್ಕೆ ಅವರಿಸಿಕೊಳ್ಳುತ್ತಿದ್ದಂತೆ ಶೋರೂಂನಲ್ಲಿದ್ದ ಕೆಲಸಗಾರರು ಕಟ್ಟಡದಿಂದ ಜಿಗಿದು ಬಚಾವ್ ಆಗಿದ್ದಾರೆ. ಘಟನೆಯಲ್ಲಿ ಒಬ್ಬರ ಕಿವಿಗೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಮೇಲ್ನೋಟಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಅವಘಡ ಸಂಭವಿಸಿರುವ ಸಾದ್ಯತೆ ಇದ್ದು ತನಿಖೆ ನಡೆಯುತ್ತಿದೆ. ಘಟನೆ ಸಂಬಂಧ ರಾಜಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಟ್ಟು ಹೋಗಿರುವ ಶೋರೂಂನಲ್ಲಿ 25 ಕಿ.ಮೀ ಸ್ಪೀಡ್‌ನ ಒಳಗಡೆ ಓಡುವ ಎಲೆಕ್ಟಿಕ್ ಬೈಕ್‌ಗಳನ್ನು 50 ಕಿ.ಮೀ ಸ್ಪೀಡ್ ಓಡುವ ರೀತಿಯಲ್ಲಿ ಮಾಡಿ ಮಾರಾಟ ಮಾಡುವ ಮೂಲಕ ಜನರಿಗೆ ವಂಚನೆ ಮಾಡುತ್ತಿದ್ದರು. 25 ಕಿಲೋಮೀಟರ್ ಒಳಗಿನ ಸ್ಪೀಡ್ ಇರುವ ಇವಿ ಬೈಕ್ ರಿಜಿಸ್ಟ್ರೇಷನ್ ಕಡ್ಡಾಯ ಇರೋದಿಲ್ಲ. ಇದನ್ನ ಬಂಡವಾಳ ಮಾಡಿಕೊಂಡು ಶೋರೂಂ ಮಾಲೀಕ ವಂಚಿಸುತ್ತಿದ್ದರು ಎಂಬ ಆರೋಪವನ್ನು RTO ಅಧಿಕಾರಿಗಳು ಮಾಡಿದ್ದಾರೆ. ಈ ಸಂಬಂಧ ಶೋರೂಂ ಮೇಲೆ RTO ಅಧಿಕಾರಿಗಳು ಇತ್ತೀಚೆಗೆ ದಾಳಿ ಮಾಡಿದ್ದರು.
ಅಧಿಕಾರಿಗಳು ಶೋರೂಂನಲ್ಲಿ ಅನಧಿಕೃತ ಮಾರಾಟಕ್ಕಿಟ್ಟಿದ್ದ ಎಲೆಕ್ಟ್ರಿಕ್ ಬೈಕ್‌ಗಳನ್ನು ಸೀಜ್ ಮಾಡಿಕೊಂಡು ಹೋಗಿದ್ದರು. ಅನಧಿಕೃತವಾಗಿ ಇ.ವಿ ಬೈಕ್ ಗಳನ್ನ ಮಾರಾಟ ಮಾಡಲು ಮುಂದಾಗುತ್ತಿರೋ ಶೋರೂಂ ಮಾಲೀಕರನ್ನ ಹುಡುಕಿ ಕಾನೂನು ಕ್ರಮ ಜರಗಿಸಲು ಅಧಿಕಾರಿಗಳು ಮುಂದಾಗಿದ್ದರು. ನಾಳೆಯಿಂದ (ಮಂಗಳವಾರ) ಎಲ್ಲಾ ಎಲೆಕ್ಟ್ರಿಕ್ ಶೋರೂಂಗಳ ಮೇಲೆ ದಾಳಿ ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ.