ChikkamagaluruDistrictsKarnatakaLatestMain Post

ಆಕಸ್ಮಿಕ ಬೆಂಕಿ – ಐದು ಎಕರೆ ಕಾಫಿ ತೋಟ ಬೆಂಕಿಗಾಹುತಿ

ಚಿಕ್ಕಮಗಳೂರು: ಆಕಸ್ಮಿಕ ಬೆಂಕಿ ತಗುಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ ಸುಮಾರು ಐದು ಎಕರೆ ಕಾಫಿ ತೋಟ ಸಂಪೂರ್ಣ ಬೆಂಕಿಗಾಹುತಿಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

ಜಿಲ್ಲೆಯ ಮೂಡಿಗೆರೆ ತಾಲೂಕಿನ ಬೆಟ್ಟಗೆರೆ ಗ್ರಾಮದ ರಿತೀಶ್ ಅವರಿಗೆ ಸೇರಿದ ಮೂರು ಎಕರೆ ಕಾಫಿ ತೋಟ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಕಾಫಿತೋಟಕ್ಕೆ ಬೆಂಕಿ ತಗುಲಿದ ಪರಿಣಾಮ ಲಕ್ಷಾಂತರ ಮೌಲ್ಯದ ಕಾಫಿ ಗಿಡ ಸುಟ್ಟು ಹೋಗಿದೆ. ದಶಕಗಳಿಂದ ಮಕ್ಕಳಂತೆ ಸಾಕಿದ್ದ ತೋಟದ ಸ್ಥಿತಿ ಕಂಡು ತೋಟದ ಮಾಲೀಕ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಸಂಸ್ಕೃತ ಕಲಿಯುವುದು ತುಂಬಾ ಅಗತ್ಯ: ಶೋಭಾ ಕರಂದ್ಲಾಜೆ

ತೋಟಕ್ಕೆ ಬೆಂಕಿ ತಗುಲಿದ ಪರಿಣಾಮ ತೋಟದಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಪೈಪ್‍ಗಳು ಕೂಡ ಬೆಂಕಿಯ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾಗಿವೆ. ಚಿಕ್ಕಮಗಳೂರು ತಾಲೂಕಿನ ಇಂದಾವರ ಗ್ರಾಮದಲ್ಲೂ ವಿದ್ಯುತ್ ತಂತಿ ತಗುಲಿ ಸುಮಾರು ಎರಡು ಎಕರೆ ಕಾಫಿ ತೋಟ ಸಂಪೂರ್ಣ ನಾಶವಾಗಿದೆ. ಕಾಫಿತೋಟದಲ್ಲಿದ್ದ ಮೆಣಸಿನ ಬಳ್ಳಿಗಳು ಕೂಡ ಸಂಪೂರ್ಣ ಸುಟ್ಟು ಕರಕಲಾಗಿವೆ. ಇದನ್ನೂ ಓದಿ: 2022ರ ಟಿ20 ವಿಶ್ವಕಪ್ ವೇಳಾಪಟ್ಟಿ ಬಿಡುಗಡೆ – ಭಾರತಕ್ಕೆ ಮೊದಲ ಎದುರಾಳಿ ಪಾಕ್

ಸಣ್ಣ-ಸಣ್ಣ ಹಿಡುವಳಿದಾರರಾಗಿ ನಾಲ್ಕೈದು ಎಕರೆಯಲ್ಲಿ ಬದುಕು ಕಟ್ಟಿಕೊಂಡಿದ್ದ ಸಣ್ಣ ಕಾಫಿಬೆಳೆಗಾರರು ತೋಟದ ಸ್ಥಿತಿ ಕಂಡು ಕಂಗಾಲಾಗಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಅತಿವೃಷ್ಟಿಯಿಂದ ನಮ್ಮ ಬದುಕು ಬೀದಿಗೆ ಬಂದಿತ್ತು. ಆದರೀಗ ಇಡೀ ತೋಟವೇ ಸಂಪೂರ್ಣ ಸುಟ್ಟು ಕರಕಲಾಗಿರುವುದರಿಂದ ಭವಿಷ್ಯವೇ ಕತ್ತಲಾಗಿದೆ. ಸರ್ಕಾರ ಸೂಕ್ತ ರೀತಿಯಲ್ಲಿ ಪರಿಹಾರ ನೀಡದಿದ್ದರೆ ಮಳೆಯಿಂದ ಅಳಿದುಳಿದ ಬದುಕು ಸಂಪೂರ್ಣ ಬೀದಿಗೆ ಬೀಳಲಿದೆ ಎಂದು ತೋಟದ ಮಾಲೀಕರು ಅತಂತ್ರಕ್ಕೀಡಾಗಿದ್ದಾರೆ.

Leave a Reply

Your email address will not be published.

Back to top button