– ವನಸಂಪತ್ತಿನ ಜೊತೆಗೆ ಜೀವ ಸಂಕುಲವೂ ಕರಕಲು
– ಬೆಂಕಿಯಿಟ್ಟ ಶಂಕಿತನೋರ್ವನ ಬಂಧನ
ಚಾಮರಾಜನಗರ: ಬಂಡೀಪುರ ಹುಲಿಸಂರಕ್ಷಿತಾರಣ್ಯದಲ್ಲಿ ಬೆಂಕಿಯ ರೌದ್ರಾವತಾರಕ್ಕೆ ಸರಿಸುಮಾರು ಹತ್ತು ಸಾವಿರ ಎಕರೆ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಕಳೆದ ಐದು ದಿನಗಳ ಹಿಂದೆ ಹಬ್ಬಿದ ಕಾಡ್ಗಿಚ್ಚು ಇದೀಗ ನಿಯಂತ್ರಣಕ್ಕೆ ಬಂದಿದೆ.
ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಬಂಡೀಪುರ ಅರಣ್ಯ ಇದೀಗ ಬೆಂದ ಕಾಡಾಗಿದೆ. ಹುಲಿ, ಕರಡಿ, ಚಿರತೆ, ಆನೆ, ಜಿಂಕೆ ಸೇರಿದಂತೆ ವನ್ಯಜೀವಿಗಳ ಆವಾಸ ಸ್ಥಾನ ಬೆಂದು ಬೋಳು-ಬೋಳಾಗಿದೆ. ಐದು ದಿನಗಳ ಹಿಂದಷ್ಟೇ ಕಾಣಿಸಿಕೊಂಡ ಕಾಡ್ಗಿಚ್ಚಿನಿಂದ ಬಂಡೀಪುರದ ಸುಮಾರು 10 ಸಾವಿರ ಎಕರೆ ಅರಣ್ಯದ ಪ್ರದೇಶ, ಅಪಾರ ಪ್ರಮಾಣದ ವನ್ಯ ಸಂಪತ್ತು ಬೆಂಕಿಗಾಹುತಿಯಾಗಿದೆ.
Advertisement
Advertisement
ನಿನ್ನೆ ಸಂಜೆವರೆಗೆ ನಿಯಂತ್ರಣಕ್ಕೆ ಬಂದಿದ್ದ ಅರಣ್ಯ ಪ್ರದೇಶದಲ್ಲೇ ಸಂಜೆ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ಬಂಡೀಪುರದ ಗೋಪಾಲಸ್ವಾಮಿ ಬೆಟ್ಟ ಮತ್ತು ಕುಂದಕೆರೆ ವಲಯದ ಅಂದಾಜು ಎರಡೂವರೆ ಸಾವಿರ ಹೆಕ್ಟೇರ್ ಪ್ರದೇಶ ಬೆಂಕಿಗೆ ಆಹುತಿಯಾಗಿದೆ. ಇದೀಗ ಮತ್ತೆ ಯಾರೋ ಕಿಡಿಗೇಡಿಗಳು ಗೋಪಾಲಸ್ವಾಮಿ ಬೆಟ್ಟದ ವಲಯಕ್ಕೆ ಬೆಂಕಿ ಹಾಕಿದ್ದಾರೆ. ಇದರಿಂದಾಗಿ 20 ಸಾವಿರಕ್ಕೂ ಅಧಿಕ ಎಕರೆ ಅರಣ್ಯ ಪ್ರದೇಶವನ್ನು ಬೆಂಕಿ ನಾಶ ಮಾಡಿದೆ.
Advertisement
ಬಂಡಿಪುರದ ಗೋಪಾಲಸ್ವಾಮಿ ಬೆಟ್ಟ ಹಾಗೂ ಕುಂದಕೆರೆ ವಲಯದಲ್ಲಿ ಬೆಂಕಿಯೇ ಹತೋಟಿಗೆ ಬರುತ್ತಿಲ್ಲ. ರಾತ್ರಿ ಇಡೀ ಬಂಡಿಪುರದಲ್ಲಿ ಬೆಂಕಿ ಉರಿಯುತ್ತಿದ್ದು, ಇದರಿಂದ ಲಕ್ಷಾಂತರ ಪ್ರಮಾಣದಲ್ಲಿ ಆಲದಮರ, ಬೀಟೆ, ನೀಲಗಿರಿ, ತೇಗ, ಹೊಂಗೆಮರ ಸೇರಿದಂತೆ ಇನ್ನಿತರ ಮರಗಳು ನಾಶವಾಗಿವೆ. ಬಂಡಿಪುರದಲ್ಲಿ ಆಕರ್ಷಣೆ ಅಂದ್ರೆ ಸಫಾರಿ ಝೋನ್. ನಿನ್ನೆ ರಾತ್ರಿ ಸಫಾರಿ ವಲಯಕ್ಕೂ ಬೆಂಕಿ ಆವರಿಸಿ ಇಡೀ ಸಫಾರಿ ಝೋನ್ ನಾಶವಾಗಿದ್ದು ಒಂದು ವಾರ ಕಾಲ ಸಫಾರಿ ಬಂದ್ ಮಾಡಲಾಗಿದೆ.
Advertisement
ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಬೆಂಕಿ ಬಿದ್ದ ಘಟನೆಗೆ ಸಂಬಂಧಿಸಿದಂತೆ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಸ್ಥಳಕ್ಕೆ ಭೇಟಿ ನೀಡಿದರು. ಅರಣ್ಯಕ್ಕೆ ಕಿಡಿಗೇಡಿಯೊಬ್ಬ ಬೆಂಕಿ ಹಾಕಿರುವ ಶಂಕೆ ವ್ಯಕ್ತವಾಗಿದ್ದು ಓರ್ವನನ್ನು ಬಂಧಿಸಲಾಗಿದೆ. ಬೆಂಕಿ ಹರಡದಂತೆ ಸರ್ವ ರೀತಿಯ ಪ್ರಯತ್ನ ಮಾಡಲಾಗುವುದು ಎಂದರು.
ಈ ಮಧ್ಯೆ, ಅರಣ್ಯ ಸಂರಕ್ಷಣಾ ರಾಯಭಾರಿಯಾಗಿರೋ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಡೀಪುರ ಅಭಯಾರಣ್ಯದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದಾಗಿ ನೊಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕಾಡು ಸುಟ್ಟಿರುವ ಫೋಟೋ ಹಾಕಿ ಆಸಕ್ತಿಯುಳ್ಳ ಸ್ವಯಂಸೇವಕರು ಅಭಿಯಾನದಲ್ಲಿ ಪಾಲ್ಗೊಳ್ಳಿ ಎಂದು ಕರೆಕೊಟ್ಟಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv