ಲಕ್ನೋ: ಮಹಾಕುಂಭ ಮೇಳ (Maha Kumbh Mela) ನಡೆದ ಸೆಕ್ಟರ್ 4ರ ಶಾಸ್ತ್ರಿ ಸೇತುವೆ ಬಳಿ ಅಗ್ನಿ ಅವಘಡ (Fire Accident) ಸಂಭವಿಸಿದ್ದು, ಓರ್ವ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಮಧ್ಯರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಕನಿಷ್ಠ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಕಿಯನ್ನು ನಿಯಂತ್ರಿಸಲಾಗಿದೆ ಎಂದು ಕರ್ತವ್ಯದಲ್ಲಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡವರನ್ನು ಪ್ರಯಾಗ್‌ರಾಜ್ ಜಿಲ್ಲೆಯ ಬಿಹಾರಿ ಲಾಲ್ (73)ಎಂದು ಗುರುತಿಸಲಾಗಿದೆ. ಅವರು ವೈದ್ಯಕೀಯ ಚಿಕಿತ್ಸೆ ನಂತರ ಆವರಣಕ್ಕೆ ಹಿಂತಿರುಗಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು ಮಲಗುವ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಇದರಿಂದ 5 ಡೇರೆಗಳು ಸುಟ್ಟು ಹೋಗಿವೆ. ಘಟನೆಗೆ ಕಾರಣ ಗೊತ್ತಾಗಿಲ್ಲ ಎಂದಿದ್ದಾರೆ.
ಘಟನೆಯಲ್ಲಿ ಮತ್ತೋರ್ವನಿಗೆ ಗಾಯವಾಗಿದೆ ಎನ್ನಲಾಗಿದ್ದು, ಯಾವುದೇ ಅಧಿಕೃತ ಮಾಹಿತಿ ತಿಳಿದು ಬಂದಿಲ್ಲ. ಅಗ್ನಿ ಅವಘಡಕ್ಕೆ ಕಾರಣ ಹಾಗೂ ಪರಿಣಾಮದ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಫೆ.26 ರಂದು ಮಹಾ ಕುಂಭ ಮೇಳ ಮುಕ್ತಾಯಗೊಂಡಿದೆ. ಆದರೂ ಸಹ ಜನರು ತ್ರಿವೇಣಿ ಸಂಗಮಕ್ಕೆ ಬರುತ್ತಲೇ ಇದ್ದಾರೆ.