ಬೆಂಗಳೂರು | ಯಮಹಾ ಬೈಕ್ ಶೋರೂಂನಲ್ಲಿ ಅಗ್ನಿ ಅವಘಡ – 50ಕ್ಕೂ ಹೆಚ್ಚು ಬೈಕ್‍ಗಳು ಭಸ್ಮ

Public TV
1 Min Read
BIKE SHOWROOM FIRE

ಬೆಂಗಳೂರು: ಯಮಹಾ ಬೈಕ್ ಶೋರೂಂ ಒಂದರಲ್ಲಿ ಅಗ್ನಿ ಅವಘಡ (Fire Accident) ಸಂಭವಿಸಿ, 50ಕ್ಕೂ ಹೆಚ್ಚು ಬೈಕ್‍ಗಳು ಸುಟ್ಟು ಭಸ್ಮವಾದ ಘಟನೆ ಮಹದೇವಪುರದ ಬಿ.ನಾರಾಯಣಪುರದಲ್ಲಿ ನಡೆದಿದೆ.

ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದೆ. 7 ಗಂಟೆಗೆ ಶೋರೂಂನ ಸಿಬ್ಬಂದಿ ಮನೆಗೆ ತೆರಳಿದ್ದರು. ಇನ್ನೂ 8 ಗಂಟೆ ಸುಮಾರಿಗೆ ಸೆಕ್ಯೂರಿಟಿ ಊಟಕ್ಕೆ ತೆರಳಿದ್ದರು. ಈ ವೇಳೆ ಅಗ್ನಿ ಅವಘಡ ಸಂಭವಿಸಿದೆ. ಅವಘಡದಿಂದ ಶೋರೂಂನಲ್ಲಿದ್ದ ಸುಮಾರು 50ಕ್ಕೂ ಹೆಚ್ಚು ಬೈಕ್ ಸುಟ್ಟು ಭಸ್ಮವಾಗಿವೆ. ಅಲ್ಲದೇ ಶೋ ರೂಂ ಹಿಂಬದಿಯಲ್ಲಿರುವ ಸರ್ವೀಸ್ ಸೆಂಟರ್‌ಗೆ ಸಹ ಬೆಂಕಿ ತಗುಲಿದೆ.

ತಕ್ಷಣ ಆಗ್ನಿಶಾಮಕ ಸಿಬ್ಬಂದಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಬಳಿಕ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಅಷ್ಟರಲ್ಲಾಗಲೇ ದೊಡ್ಡ ಮಟ್ಟದಲ್ಲಿ ಬೆಂಕಿ ಅವರಿಸಿ ಶೋರೂಂನಲ್ಲಿದ್ದ 40ಕ್ಕೂ ಹೆಚ್ಚು ಬೈಕ್ ಹಾಗೂ ಶೋರೂಂ ಹಿಂಭಾಗದ ಸರ್ವಿಸ್ ಸೆಂಟರ್‌ನಲ್ಲಿದ್ದ 20ಕ್ಕೂ ಹೆಚ್ಚು ಬೈಕ್‍ಗಳು ಬೆಂಕಿಗೆ ಆಹುತಿಯಾಗಿವೆ.

ಅಗ್ನಿ ಅವಘಡ ಸಂಭಿವಿಸಿದ ಶೋರೂಂ ಪಕ್ಕದಲ್ಲಿ ಮತ್ತೊಂದು ಶೋರೂಂ ಇದ್ದು, ಅಲ್ಲಿಗೂ ಬೆಂಕಿ ವ್ಯಾಪಿಸಿತ್ತು. ಅಲ್ಲಿನ ಬೈಕ್‍ಗಳನ್ನು ತಕ್ಷಣ ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ಅಗ್ನಿಶಾಮಕ ಸಿಬ್ಬಂದಿ ಬಳಿಕ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article