ಕೊಪ್ಪಳ: ಇಲ್ಲಿನ ಗಂಗಾವತಿಯಲ್ಲಿ (Gangavathi) ಬೆಂಕಿ ಅವಘಡ ಸಂಭವಿಸಿದ್ದು, ಈ ವೇಳೆ ಸಾಕು ನಾಯಿ ನಾಲ್ವರ ಜೀವ ಉಳಿಸಿದ ಘಟನೆ ಮಹಾವೀರ ಸರ್ಕಲ್ ಸಮೀಪದ ಅಂಗಡಿಯಲ್ಲಿ ಸಂಭವಿಸಿದೆ.
ಅಗ್ನಿ ಅವಘಡದಲ್ಲಿ ಇಬ್ಬರು ಗಾಯಗೊಂಡಿದ್ದು, ಸುತ್ತಮುತ್ತಲಿನ ನಾಲ್ಕೈದು ಅಂಗಡಿಗಳು ಬೆಂಕಿಗಾಹುತಿಯಾಗಿವೆ.ಇದನ್ನೂ ಓದಿ: ರಿಯಲ್ ಎಸ್ಟೇಟ್ ಜೊತೆ ಪೊಲೀಸರು ಕೈ ಜೋಡಿಸಿದ್ರೆ ಸಹಿಸೊಲ್ಲ- ಸಿಎಂ ಎಚ್ಚರಿಕೆ
ಚಿನಿವಾಲರ ಆಸ್ಪತ್ರೆಯ ಎದುರುಗಡೆ ಇರುವ ಹೋಟೆಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ರಾತ್ರಿ 2 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ರಾತ್ರಿ ವೇಳೆ ಬೆಂಕಿಯ ಪ್ರಮಾಣ ಹೆಚ್ಚಿದ್ದು, ನಂದಿಸಲು ಸಾಧ್ಯವಾಗಿಲ್ಲ. ಇದರಿಂದ ಹೋಟೆಲ್‌ನಲ್ಲಿ ಕಾಣಿಸಿಕೊಂಡ ಬೆಂಕಿ ಪಕ್ಕದ ಮನೆಗೂ ಕೂಡ ಆವರಿಸಿದೆ. ಈ ವೇಳೆ ಸಾಕಿದ್ದ ನಾಯಿ ಜೋರಾಗಿ ಬೊಗಳುವ ಮೂಲಕ ಮಾಲೀಕರನ್ನು ಎಬ್ಬಿಸಿ ಪ್ರಾಣಾಪಾಯದಿಂದ ಪಾರು ಮಾಡಿದೆ.
ಇದೇ ವೇಳೆ ಬೆಂಕಿಯಿಂದಾಗಿ ಹೋಟೆಲ್‌ನಲ್ಲಿದ್ದ ಸಿಲಿಂಡರ್ ಸ್ಫೋಟಗೊಂಡು ದೊಡ್ಡ ಮಟ್ಟದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದರಿಂದ ಹೋಟೆಲ್, ಮನೆಯಲ್ಲಿರುವ ಧಾನ್ಯಗಳು, ಬಟ್ಟೆಗಳು ಹಾಗೂ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಸ್ತುಗಳು ಸುಟ್ಟು ಹೋಗಿವೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ, ಅಗ್ನಿ ನಂದಿಸಲು ಮುಂದಾಗಿದ್ದಾರೆ.
ಸಿಲಿಂಡರ್ ಸ್ಫೋಟಗೊಂಡಿದ್ದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಗಂಗಾವತಿ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಇದನ್ನೂ ಓದಿ: ಅವಿವಾಹಿತ ಜೋಡಿಗೆ ಓಯೋ ರೂಮ್ ನಿರ್ಬಂಧ – ಬೆಂಗಳೂರಲ್ಲೂ ನಿಯಮ ಜಾರಿಗೆ ಬಜರಂಗದಳ ಮನವಿ