– ಯುನೈಟೆಡ್ ಪೇಂಟ್ಸ್ ಗೋದಾಮಿನಲ್ಲಿ ಅಗ್ನಿ ಅನಾಹುತ
– 20 ಅಗ್ನಿಶಾಮಕ ತಂಡದಿಂದ ಕಾರ್ಯಾಚರಣೆ
ಬೆಂಗಳೂರು: ಪೇಂಟ್ ಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದ ಘಟನೆ ನೆಲಮಂಗಲ ಸಮೀಪದ ಕುದರಗೆರೆಯಲ್ಲಿ ನಡೆದಿದೆ.
ಯುನೈಟೆಡ್ ಪೇಂಟ್ಸ್ ಗೆ ಸೇರಿದ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಸಿಲಿಂಡರ್ ಸ್ಫೋಟದ ರೀತಿಯಲ್ಲಿ ಶಬ್ದ ಕೇಳಿಬಂದ ಬಳಿಕ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ಅವಘಡದಿಂದ ಬಾರಿ ಅನಾಹುತ ಸಂಭವಿಸುವ ಸಾಧ್ಯತೆಯಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಗೋದಾಮಿನ ಸುತ್ತಮುತ್ತಲಿನ ಮನೆಗಳಲ್ಲಿ ವಾಸಿಸುತ್ತಿರುವವರನ್ನು ಪೊಲೀಸರು ಖಾಲಿ ಮಾಡಿಸುತ್ತಿದ್ದಾರೆ. ಗಾಳಿಯಿಂದಾಗಿ ಬೆಂಕಿ ರಭಸ ಮತ್ತಷ್ಟು ಹೆಚ್ಚಾಗುತ್ತಿದ್ದು, ಆಕಾಶದೆತ್ತರಕ್ಕೆ ಅಗ್ನಿಯ ಕೆನ್ನಾಲಿಗೆ ಆವರಿಸಿದೆ. ಅಲ್ಲದೆ ಎಲ್ಲೆಲ್ಲೂ ದಟ್ಟ ಹೊಗೆ ತುಂಬಿಕೊಂಡಿದೆ.
ಗೋದಾಮಿನಲ್ಲಿದ್ದ ಕೋಟ್ಯಂತರ ರೂ. ಬೆಲೆಬಾಳುವ ವಸ್ತುಗಳು ಸುಟ್ಟು ಕರಕಲಾಗಿದೆ. ಗೋದಾಮಿನ ಸುತ್ತಮುತ್ತಲು ಬೆಂಕಿ ಹಾಗೂ ಹೊಗೆಯ ರಭಸಕ್ಕೆ ಪ್ರಾಣಿ ಪಕ್ಷಿಗಳ ತತ್ತರಿಸಿ ಹೋಗಿವೆ. ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದ್ದಾರೆ. ಈ ಬೆಂಕಿಯನ್ನು ಆರಿಸಲು ಸುಮಾರು 20 ಅಗ್ನಿಶಾಮಕ ತಂಡ ಆಗಮಿಸಿದ್ದು ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಹಿಂದೆ ಈ ಅಗ್ನಿ ದುರಂತ ಸಂಭವಿಸಿದ್ದು, ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಪ್ತಿಗೆ ಈ ಪ್ರದೇಶ ಸೇರುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv