ಚಾಮರಾಜನಗರ: ತಾಲೂಕಿನ ಬಸವರಾಜಪುರ ಗ್ರಾಮದಲ್ಲಿರೋ ದನದ ಕೊಟ್ಟಿಗೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಮೂರು ಹಸುಗಳು ಸಜೀವ ದಹನಗೊಂಡಿರುವ ಘಟನೆ ನಡೆದಿದೆ.
ಗ್ರಾಮದ ಬಸವದೇವರು ಎಂಬವರಿಗೆ ಸೇರಿದ ಹಸುಗಳು ಬೆಂಕಿಗಾಹುತಿಯಾಗಿವೆ. ಭಾನುವಾರ ರಾತ್ರಿ ಬೆಂಕಿ ತಗುಲಿದ್ದು, ಹಸುಗಳು ಬೆಂಕಿಯ ತೀವ್ರತೆಗೆ ಸುಟ್ಟು ಕರಕಲಾಗಿವೆ. ಕೊಟ್ಟಿಗೆಯ ಪಕ್ಕದಲ್ಲಿದ್ದ ಮೇವಿಗೂ ಬೆಂಕಿ ತಗುಲಿದ್ದರಿಂದ ತಕ್ಷಣವೇ ಬೆಂಕಿ ಆವರಿಸಿಕೊಂಡಿದೆ ಎಂದು ಹೇಳಲಾಗಿದೆ.
ಬೇಸಿಗೆ ಮತ್ತು ಬರದಿಂದಾಗಿ ಮೇವಿಗೆ ಅಭಾವ ಇರುವುದರಿಂದ ಕೊಟ್ಟಿಗೆಯಲ್ಲೇ ಮೇವನ್ನು ದಾಸ್ತಾನು ಮಾಡಲಾಗಿತ್ತು. ಒಂದು ಲಕ್ಷಕ್ಕೂ ಅಧಿಕ ಬೆಲೆಬಾಳುವ ಹಸುಗಳನ್ನು ಕಳೆದುಕೊಂಡಿರುವ ರೈತ ಬಸವದೇವರು ಕಂಗಾಲಾಗಿದ್ದಾರೆ. ಈ ಸಂಬಂಧ ಆಲೂರುಒಮ್ಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.