ಬೆಂಗಳೂರು: ನಟ ಅರುಣ್ ಸಾಗರ್ ಅವರಿಗೆ ಸೇರಿದ ಶೂಟಿಂಗ್ ಶೆಡ್ ಬೆಂಕಿಗಾಹುತಿಯಾದ ಘಟನೆ ಬೆಂಗಳೂರಿನ ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ನಡೆದಿದೆ.
ಉತ್ತರಹಳ್ಳಿ ಮುಖ್ಯ ರಸ್ತೆಯಲ್ಲಿ ಅರುಣ್ ಸಾಗರ್ ಅವರಿಗೆ ಸೇರಿದ ಶೂಟಿಂಗ್ ಶೆಡ್ ಹೌಸ್ ಇತ್ತು. ಅದರ ಪಕ್ಕದಲ್ಲೆ ಪ್ಲಾಸ್ಟಿಕ್ ಗೋದಾಮು ಕೂಡಾ ಇತ್ತು. ಆಕಸ್ಮಿಕವಾಗಿ ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ ಬಿದ್ದ ಪರಿಣಾಮ ಬೆಂಕಿಯ ತೀವ್ರತೆ ಪಕ್ಕದಲ್ಲಿದ್ದ ಶೂಟಿಂಗ್ ಶೆಡ್‍ಗೂ ಆವರಿಸಿದೆ. ಇದರಿಂದಾಗಿ ಶೂಟಿಂಗ್ ಶೆಡ್ ಸಂಪೂರ್ಣವಾಗಿ ಹೊತ್ತಿ ಉರಿದಿದೆ.
ಸುದ್ದಿ ತಿಳಿದು ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸುವ ವೇಳೆಗೆ ಶೂಟಿಂಗ್ ಶೆಡ್ ಸಂಪೂರ್ಣವಾಗಿ ಕರಕಲಾಗಿ ಹೋಗಿತ್ತು. ಈ ಕುರಿತು ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.






