ಬೆಂಗಳೂರು: ನಗರದಲ್ಲಿ ಮತ್ತೊಂದು ಅಗ್ನಿ ದುರಂತ ಸಂಭವಿಸಿದೆ. ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಫ್ಲೋರ್ ಮಿಲ್ ರಸ್ತೆಯಲ್ಲಿ ಸೋಫಾ ಕೆಮಿಕಲ್ ತಯಾರು ಮಾಡುವ ಮೂರು ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ದುರಂತ ಘಟಿಸಿದೆ.
ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ. ಕೆಮಿಕಲ್ ತಯಾರಾಗುತ್ತಿದ್ದ ಸ್ಥಳವಾದ್ದರಿಂದ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಬೆಂಕಿ ಹೊತ್ತಿ ಉರಿದಿದೆ. ಕಟ್ಟದಲ್ಲಿದ್ದ ಕಾರ್ಮಿಕರನ್ನು ಸ್ಥಳೀಯರು ಸುರಕ್ಷಿತವಾಗಿ ಹೊರ ತಂದಿದ್ದಾರೆ.
Advertisement
Advertisement
ಕಳೆದ ನಾಲ್ಕೈದು ವರ್ಷಗಳಿಂದ ಈ ಕಟ್ಟಡದಲ್ಲಿ ಸೋಫಾ ಮಾಲೀಷ್ ಮಾಡುವ ಕೆಮಿಕಲನ್ನು ತಯಾರಿಸಲಾಗುತ್ತಿದೆ. ಸೋಮವಾರದಂದು ಅಗ್ನಿ ಅವಘಡ ನಡೆದಾಗ ಸುಮಾರು 200ಕ್ಕೂ ಹೆಚ್ಚು ಕೆಮಿಕಲ್ ಟಿನ್ ಗಳು ಪತ್ತೆಯಾಗಿವೆ. ಸದ್ಯ ಕಟ್ಟಡ ಮಾಲೀಕ ವಾಜೀದ್ ಅಹ್ಮದ್ ತಲೆ ಮರೆಸಿಕೊಂಡಿದ್ದಾನೆ.
Advertisement
ಬೆಂಕಿ ದುರಂತ ನಡೆದ ಕಟ್ಟಡದ ಪಕ್ಕದಲ್ಲೇ ಅನೇಕ ಮನೆಗಳಿದ್ದು ಬೆಂಕಿ ಆವರಿಸುವ ಆತಂಕ ಮನೆ ಮಾಡಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಲೀ ಹಾಗು ಇನ್ನಿತರೆ ತೊಂದರೆ ಕಂಡುಬಂದಿಲ್ಲ. ಕೆಮಿಕಲ್ ತಯಾರು ಮಾಡುವ ಘಟಕ ಸ್ಥಾಪನೆಗೆ ಅನುಮತಿಯನ್ನಾಗಲಿ, ಪರವಾನಿಗೆಯನ್ನಾಗಲಿ ಮಹಾನಗರಪಾಲಿಕೆ ನೀಡಿಲ್ಲ. ಮಾಲೀಕರು ಅವಘಡ ಸಂಭವಿಸಿದಾಗ ಎದುರಿಸಬೇಕಾಗಿರುವ ಯಾವುದೇ ಮುಂಜಾಗ್ರತಾ ಕ್ರಮಗಳನ್ನ ತೆಗೆದುಕೊಂಡಿಲ್ಲ.
Advertisement
ಬೆಂಕಿ ದುರಂತ ನಡೆದ ಸ್ಥಳಕ್ಕೆ 10ಕ್ಕೂ ಹೆಚ್ಚು ಅಗ್ನಿಶಾಮಕ ವಾಹನ ಮತ್ತು ನೂರಾರು ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಸತತ ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಮೇಯರ್ ಸಂಪತ್ ರಾಜ್ ಹಾಗೂ ಅಗ್ನಿಶಾಮಕ ತಂಡಗಳ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಟ್ಟಡ ಮತ್ತು ಕೆಮಿಕಲ್ ಫ್ಯಾಕ್ಟರಿ ಮಾಲೀಕನ ಬೇಜವಾಬ್ದಾರಿತನದ ವಿರುದ್ಧ ಡಿಜೆ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ಮಾಲೀಕ ಮತ್ತು ಸಂಬಂಧಪಟ್ಟ ಇಲಾಖೆಗಳ ಬೇಜವಾಬ್ದಾರಿತನದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.