ಬೆಂಗಳೂರು: ದೀರ್ಘಕಾಲದ ರಜೆ ಮೇಲೆ ತೆರಳಿ ಬಳಿಕ ಕೆಲಸಕ್ಕೆ ವಾಪಾಸಾಗುವಾಗ ನಕಲಿ ವೈದ್ಯಕೀಯ ಸರ್ಟಿಫಿಕೇಟ್ ಸಲ್ಲಿಸಿದ ಸಿಬ್ಬಂದಿ ವಿರುದ್ಧ ಬಿಎಂಟಿಸಿ ಕಠಿಣ ಕ್ರಮಕ್ಕೆ ಮುಂದಾಗಿದೆ.
ಸುದೀರ್ಘ ರಜೆಯ ಬಳಿಕ ನಕಲಿ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿ ಕರ್ತವ್ಯಕ್ಕೆ ಹಾಜರಾದ 18 ಮಂದಿ ಡ್ರೈವರ್, ಕಂಡಕ್ಟರ್ ವಿರುದ್ಧ ಬಿಎಂಟಿಸಿಯ ಭದ್ರತಾ ಮತ್ತು ಜಾಗೃತ ದಳದ ಅಧಿಕಾರಿ ಸಿ.ಎಸ್ ಸ್ಮಿತಾ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.
Advertisement
Advertisement
ಬಿಎಂಟಿಸಿಯ ಡಿಪೋಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿಎಂಟಿಸಿ ಚಾಲಕರು ಹಾಗೂ ನಿರ್ವಾಹಕರು ಮೇಲಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ, ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ದೀರ್ಘಕಾಲದ ರಜೆ ಮೇಲೆ ತೆರಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಎಷ್ಟು ಬಾರಿ ನೋಟೀಸ್ ನೀಡಿದರೂ ಸೇವೆಗೆ ಮರಳದೆ ರಜೆ ಮುಗಿದ ಬಳಿಕ ಅನಾರೋಗ್ಯದ ನೆಪ ಹೇಳಿ ವೈದ್ಯಕೀಯ ಸರ್ಟಿಫಿಕೇಟ್ ಸಲ್ಲಿಸಿ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.
Advertisement
ಯಾವಾಗ ಇಂತಹ ಪ್ರಕರಣಗಳು ಪುನರಾವರ್ತನೆ ಆಗಲು ಶುರುವಾಯಿತೋ ಇದರಿಂದ ಎಚ್ಚೆತ್ತ ಬಿಎಂಟಿಸಿಯ ಭದ್ರತಾ ಮತ್ತು ಜಾಗೃತ ದಳ ವೈದ್ಯಕೀಯ ಸರ್ಟಿಫಿಕೇಟ್ ನೀಡಿದ ಆಸ್ಪತ್ರೆಗಳಲ್ಲಿ ಪರಿಶೀಲನೆ ನಡೆಸಿದಾಗ ಅದು ನಕಲಿ ಪ್ರಮಾಣ ಪತ್ರ ಎನ್ನುವುದು ತಿಳಿದು ಬಂದಿದೆ. ಹೀಗೆ ನಕಲಿ ವೈದ್ಯಕೀಯ ಪ್ರಮಾಣ ಪತ್ರ ಸಲ್ಲಿಸಿ ಕರ್ತವ್ಯಕ್ಕೆ ಹಾಜರಾಗಿರುವ 18 ಮಂದಿ ಚಾಲಕರ ಹಾಗೂ ನಿರ್ವಾಹಕರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಈ ಮೂಲಕ ಬಿಎಂಟಿಸಿ, ರಜೆ ಮೇಲೆ ತೆರಳುವ ಎಲ್ಲಾ ಸಿಬ್ಬಂದಿಗೆ ಎಚ್ಚರಿಕೆ ನೀಡಿದೆ.