ತುಮಕೂರು: ಗ್ರಾಮಾಂತರ ಕ್ಷೇತ್ರದ ಬಿಜೆಪಿ ಮಾಜಿ ಶಾಸಕ ಬಿ.ಸುರೇಶ್ ಗೌಡ (Suresh Gowda) ಅವರನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದಾರೆ ಎಂಬ ಆರೋಪದ ಮೇಲೆ ತುಮಕೂರು ಗ್ರಾಮಾಂತರದ ಹಾಲಿ ಜೆಡಿಎಸ್ ಶಾಸಕ ಡಿಸಿ ಗೌರಿಶಂಕರ್ (Gowrishankar) ಸೇರಿದಂತೆ ಒಟ್ಟು ಮೂವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಸುರೇಶ್ ಗೌಡರು ಕೊಟ್ಟ ದೂರಿನ ಅನ್ವಯ ತುಮಕೂರಿನ (Tumakuru) ಕ್ಯಾತ್ಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಗ್ರಾಮಾಂತರ ಶಾಸಕ ಗೌರಿಶಂಕರ್ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಿರೇಹಳ್ಳಿ ಮಹೇಶ್, ಶಾಸಕ ಗೌರಿಶಂಕರ, ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ ಅಟ್ಟಿಕಾ ಬಾಬು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇದನ್ನೂ ಓದಿ: ಸುರೇಶ್ ಗೌಡ ಕೊಲೆಗೆ ಸುಪಾರಿ ಆರೋಪ- 5 ಕೋಟಿ ಡೀಲ್ ನಡೆದಿದೆ ಎಂದ ಮಾಜಿ ಶಾಸಕ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕ ಗೌರಿಶಂಕರ ಅಕ್ರಮ ಎಸಗಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ಆರೋಪಿಸಿ ಪರಾಜಿತ ಅಭ್ಯರ್ಥಿ ಸುರೇಶ್ ಗೌಡ ಆಯೋಗಕ್ಕೆ ದೂರು ನೀಡಿದ್ದರು. ಅಲ್ಲದೇ ನಕಲಿ ಬಾಂಡ್ ಹಂಚಿ ಮತದಾರರಿಗೆ ಮೋಸ ಮಾಡಿದ್ದಾರೆ ಎಂದು ದೂರಿದ್ದರು. ಈ ದೂರಿನಿಂದ ಶಾಸಕ ಗೌರಿಶಂಕರ ಕೆರಳಿ ನನ್ನ ಕೊಲೆ ಮಾಡಲು ಸುಪಾರಿ ನೀಡಿದ್ದಾರೆ ಎಂದು ಸುರೇಶ್ ಗೌಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತುಮಕೂರಿನ ಮಾಜಿ ಮೇಯರ್ ಗಡ್ಡ ರವಿಯನ್ನು ಕೊಲೆ ಮಾಡಿ ಜೈಲಿನಲ್ಲಿದ್ದ ರೌಡಿಶೀಟರ್ ಸುಜಯ್ ಭಾರ್ಗವ್‌ಗೆ ಸುಮಾರು 5 ಕೋಟಿ ರೂ.ಗೆ ಸುಪಾರಿ ನೀಡಲಾಗಿದೆ. ಅದರ ವೆಚ್ಚವನ್ನು ತುಮಕೂರು ನಗರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅಟ್ಟಿಕಾ ಗೋಲ್ಡ್ ಕಂಪನಿಯ ಮಾಲೀಕ ಅಟ್ಟಿಕಾ ಬಾಬು ಭರಿಸುವ ಪ್ಲಾನ್ ಮಾಡಿದ್ದಾರೆ ಎಂದು ದೂರಲಾಗಿದೆ. ಅಲ್ಲದೇ ಭಾರಿ ವಾಹನ ಹತ್ತಿಸಿ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸುವ ಸಂಚು ರೂಪಿಸಿದ್ದಾರೆ ಎಂದು ಸುರೇಶ್ ಗೌಡ ದೂರಿದ್ದಾರೆ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಶಾಸಕ ಗೌರಿಶಂಕರ್‌ಗೆ ಥೈಲ್ಯಾಂಡ್ ಅಂದರೆ ಬಲು ಪ್ರೀತಿ, ಗೋವಾ ಅಂದರೆ ಮೋಜು, ಅಸೆಂಬ್ಲಿ ಅಂದರೆ ಅಲರ್ಜಿ: ಸುರೇಶ್ ಗೌಡ