ಹುಬ್ಬಳ್ಳಿ: ನಕಲಿ ದಾಖಲೆ ತೋರಿಸಿ ಹಿಂದೂ ಯುವತಿಯನ್ನು ಮದುವೆಯಾದ ಕನ್ನಡದ ಖ್ಯಾತ ಯೂಟ್ಯೂಬರ್ ಕ್ವಾಜಾ ಶಿರಹಟ್ಟಿ ಅಲಿಯಾಸ್ ಮುಕಳೆಪ್ಪ (Youtuber Mukaleppa) ವಿರುದ್ಧ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಇದೀಗ ಯುವತಿಯ ಹೆತ್ತವರು ಹಿಂದೂಪರ ಸಂಘಟನೆಗಳ ಜೊತೆಗೆ ಠಾಣೆಗೆ ಆಗಮಿಸಿ ಮುಕಳೆಪ್ಪ ವಿರುದ್ಧ ಜೀವ ಬೆದರಿಕೆ ಮತ್ತು ಅಪಹರಣ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಧಾರವಾಡ | ನಕಲಿ ದಾಖಲೆ ಸೃಷ್ಟಿಸಿ ಹಿಂದೂ ಯುವತಿ ಜೊತೆ ಮದ್ವೆ – ಯುಟ್ಯೂಬರ್ ಮುಕಳೆಪ್ಪ ವಿರುದ್ಧ ದೂರು
ರೀಲ್ಸ್ ಮಾಡುವ ನೆಪದಲ್ಲಿ ಮುಕಳೆಪ್ಪ ಮದುವೆ ಸಮಾರಂಭದ ವೇದಿಕೆ ಸಿದ್ಧಪಡಿಸಿದ್ದ. ನಾಲ್ಕು ತಿಂಗಳ ಹಿಂದೆ ನಮ್ಮ ಮಗಳನ್ನು ಆತ ಅಪಹರಿಸಿಕೊಂಡು ಹೋಗಿ ಮದುವೆಯಾಗಿದ್ದಾನೆ. ಆಗ ಅದು ರೀಲ್ಸ್ ಎಂದಿದ್ದ ಮುಕುಳೆಪ್ಪ, ಈಗ ನಿಜವಾಗಿ ಮದುವೆಯಾಗಿದ್ದೇನೆ ಎನ್ನುತ್ತಿದ್ದಾನೆ. ಇದು ಸುಳ್ಳು ಮದುವೆ. ನಮ್ಮ ಮಗಳನ್ನು ವಾಪಸ್ ಕಳುಹಿಸಿಕೊಡಿ ಎಂದಿದ್ದಕ್ಕೆ ಫೋನ್ ಮಾಡಿ ಧಮ್ಕಿ ಹಾಕುತ್ತಿದ್ದಾನೆ. ಮುಕಳೆಪ್ಪನನ್ನು ಕೂಡಲೇ ಬಂಧಿಸಿ, ನಮ್ಮ ಮಗಳನ್ನು ವಾಪಸ್ ಕಳುಹಿಸಿಕೊಡಿ ಎಂದು ಯುವತಿಯ ಹೆತ್ತವರು ಠಾಣೆಗೆ ದೂರು ನೀಡಿದ್ದಾರೆ.
ಯುವತಿ ಹೆತ್ತವರ ದೂರಿನಾಧಾರದಲ್ಲಿ ಮುಕಳೆಪ್ಪನ ವಿರುದ್ಧ ಹಳೆ ಹುಬ್ಬಳ್ಳಿ ಪೊಲೀಸರು ಜೀವ ಬೆದರಿಕೆ ಮತ್ತು ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಲವ್ ಜಿಹಾದ್ ಆರೋಪದ ಮೇಲೂ ದೂರು
ಮುಕಳೆಪ್ಪ ಮೂಲತಃ ಇಸ್ಲಾಂ ಧರ್ಮಕ್ಕೆ ಸೇರಿದವನಾಗಿದ್ದು, ನಕಲಿ ದಾಖಲೆ ಕೊಟ್ಟು ಹಿಂದೂ ಯುವತಿಯನ್ನ ವಿವಾಹವಾಗಿದ್ದಾನೆ. ಈ ಬಗ್ಗೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರಿಜಿಸ್ಟರ್ ಮಾಡಿಕೊಳ್ಳುವ ಮೂಲಕ ಮುಕಳೆಪ್ಪ ವಿವಾಹವಾಗಿದ್ದಾನೆ. ಇದು ಲವ್ ಜಿಹಾದ್ ಎಂದು ಬಜರಂಗದಳ ಕಾರ್ಯಕರ್ತರು ದೂರಿನಲ್ಲಿ ಆರೋಪಿಸಿದ್ದಾರೆ.