– ಜುಲೈ ತಿಂಗಳಿನಲ್ಲಿ ಪತ್ರ ಬರೆದಿದ್ದ ಗಣ್ಯರು
– ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಕೇಸ್ ದಾಖಲು
– ದೇಶಕ್ಕೆ ಕೆಟ್ಟ ಹೆಸರು ತರಲು ಉದ್ದೇಶಪೂರ್ವಕವಾಗಿ ಪತ್ರ ಆರೋಪ
ಪಾಟ್ನಾ: ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಮಾಬ್ ಲಿಂಚಿಂಗ್(ಗುಂಪು ಹತ್ಯೆ) ನಿಲ್ಲಬೇಕು ಎಂದು ಆಗ್ರಹಿಸಿ ಪ್ರಧಾನಿಗೆ ಬಹಿರಂಗ ಪತ್ರ ಬರೆದ ದೇಶದ ನಾನಾ ಕ್ಷೇತ್ರಗಳ 49 ಜನಪ್ರಿಯ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಜಿಲ್ಲಾ ಕೋರ್ಟ್ ನ್ಯಾ. ಸೂರ್ಯಕಾಂತ್ ತ್ರಿಪಾಠಿ ಎಫ್‍ಐಆರ್ ದಾಖಲಿಸಲು ಅನುಮತಿ ನೀಡಿದ ಎರಡು ತಿಂಗಳ ಬಳಿಕ ಬಿಹಾರದ ಮುಜಾಫರಾಬಾದ್ ನಲ್ಲಿ ರಾಮಚಂದ್ರ ಗುಹಾ, ಮಣಿರತ್ನಂ, ಅಪರ್ಣ ಸೇನ್ ಸೇರಿದಂತೆ 49 ಮಂದಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಪ್ರತಿಕ್ರಿಯೆ ನೀಡಿದ ವಕೀಲ ಸುಧೀರ್ ಕುಮಾರ್ ಓಜಾ, ಜಿಲ್ಲೆಯ ಮುಖ್ಯ ನ್ಯಾಯಾಧೀಶರು ಆಗಸ್ಟ್ 20 ರಂದು ನನ್ನ ಅರ್ಜಿಯನ್ನು ಪರಿಗಣಿಸಿ ಎಫ್‍ಐಆರ್ ದಾಖಲು ಮಾಡಲು ಅನುಮತಿ ನೀಡಿದರು. ಹೀಗಾಗಿ ಸದರ್ ಪೊಲೀಸ್ ಠಾಣೆಯಲ್ಲಿ ನಾನು ದೂರು ನೀಡಿದ್ದೇನೆ. ಪ್ರಧಾನಿ ಮೋದಿ ಉತ್ತಮ ಕಾರ್ಯ ಮಾಡುತ್ತಿದ್ದರೂ ಉದ್ದೇಶ ಪೂರ್ವಕವಾಗಿ ದೇಶದ ಏಕತೆ ಮತ್ತು ಸಮಗ್ರತೆ ಧಕ್ಕೆ ತರಲು ಈ ಪತ್ರವನ್ನು ಬರೆದಿದ್ದಾರೆ. ಪ್ರತ್ಯೇಕವಾದಿ ಮನಸ್ಥಿತಿಯನ್ನು ಬೆಂಬಲಿಸಲೆಂದೇ ಈ ಪತ್ರವನ್ನು ಬರೆಯಲಾದ ಹಿನ್ನೆಲೆಯಲ್ಲಿ ನಾನು ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ದೂರಿನ ಬಗ್ಗೆ ಪೊಲೀಸರು ಪ್ರತಿಕ್ರಿಯಿಸಿ, ಐಪಿಸಿಯ ದೇಶದ್ರೋಹ, ಧಾರ್ಮಿಕ ಭಾವನೆಗೆ ಧಕ್ಕೆ, ಉದ್ದೇಶ ಪೂರ್ವಕವಾಗಿ ಪ್ರಚೋದಿಸಿ ಶಾಂತಿ ಕದಡುವ ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಪತ್ರದಲ್ಲಿ ಏನಿತ್ತು?
ಈ ವರ್ಷದ ಜುಲೈ ತಿಂಗಳಿನಲ್ಲಿ ದೇಶಾದ್ಯಂತ ಹೆಚ್ಚುತ್ತಿರುವ ಕೋಮು ದ್ವೇಷದ ಅಪರಾಧಗಳು ಹಾಗೂ ಗುಂಪು ಹಲ್ಲೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿ 49 ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದರು.
ಜು. 23ರಂದು ಕಳುಹಿಸಲಾದ ಈ ಪತ್ರಕ್ಕೆ ಇತಿಹಾಸಕಾರ ರಾಮಚಂದ್ರ ಗುಹಾ, ಸಮಾಜಶಾಸ್ತ್ರ ತಜ್ಞ ಆಶಿಸ್ ನಂದಿ, ಚಿತ್ರ ನಿರ್ದೇಶಕರಾದ ಅಡೂರು ಗೋಪಾಲಕೃಷ್ಣನ್, ಅಪರ್ಣ ಸೇನ್, ಶಾಸ್ತ್ರೀಯ ಸಂಗೀತ ಗಾಯಕಿ ಶುಭಾ ಮುದ್ಗಲ್, ಮಣಿರತ್ನಂ, ಅನುರಾಗ್ ಕಶ್ಯಪ್, ಶ್ಯಾಮ್ ಬೆನಗಲ್, ಅನುಪಮ್ ರಾಯ್, ಕೊಂಕಣ್ ಸೇನ್ ಶರ್ಮಾ ಅವರಂತಹ ಚಿತ್ರರಂಗದ ಪ್ರಮುಖರು ಸೇರಿದಂತೆ ಒಟ್ಟು 49 ಮಂದಿ ಈ ಪತ್ರಕ್ಕೆ ಸಹಿ ಮಾಡಿದ್ದರು.
‘ಜೈ ಶ್ರೀರಾಮ್’ ನಾಮಘೋಷವು ಇಂದು ಹಿಂಸಾಚಾರ, ಶೋಕದ ಮೂಲಮಂತ್ರವೆನಿಸಿದೆ. ಶಾಂತಿಪ್ರಿಯರೂ, ಹೆಮ್ಮೆಯ ಭಾರತೀಯರೂ ಆಗಿರುವ ನಮ್ಮಲ್ಲಿ, ನಮ್ಮ ಪ್ರೀತಿಯ ಭಾರತದಲ್ಲಿ ಧರ್ಮಾಧಾರಿತ ಹಿಂಸಾಚಾರಗಳು ಆತಂಕ ಸೃಷ್ಟಿಸಿವೆ. ಮುಸ್ಲಿಮರು, ದಲಿತರು, ಇತರೆ ಅಲ್ಪಸಂಖ್ಯಾತರ ಮೇಲಿನ ಥಳಿತ ಹತ್ಯೆಗಳು ಹೆಚ್ಚಾಗುತ್ತಿದ್ದು ಇವುಗಳು ನಿಲ್ಲಲೇಬೇಕು ಎಂದು ಪತ್ರದಲ್ಲಿ ಆಗ್ರಹಿಸಿದ್ದರು.
ಶಾಂತಿಪ್ರಿಯರಾದ ಮತ್ತು ಹೆಮ್ಮೆ ಪಡುವಂತಹ ಭಾರತೀಯರಾದ ನಾವು ಇತ್ತೀಚೆಗೆ ನಮ್ಮ ನಲ್ಮೆಯ ದೇಶದಲ್ಲಿ ಹೆಚ್ಚಿರುವ ಕರಾಳ ಘಟನೆಗಳಿಂದ ತೀವ್ರ ಕಳವಳಗೊಂಡಿದ್ದೇವೆ. ಕಳೆದ 9 ವರ್ಷಗಳಿಂದ ದಲಿತರ ವಿರುದ್ಧ ದೌರ್ಜನ್ಯ, ಕೋಮು ಗಲಭೆ ಪ್ರಕರಣಗಳು ಹೆಚ್ಚುತ್ತಿವೆ. ಆದರೆ ಈ ಪೈಕಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿರುವ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಎಂಬ ವಿಷಯ ತಿಳಿದು ಆಘಾತವಾಗಿದೆ. ದೇಶದಲ್ಲಿ ನಡೆಯುತ್ತಿರುವ ಗುಂಪು ಹಲ್ಲೆಗಳ ಕುರಿತು ಸಂಸತ್ತಿನಲ್ಲಿ ನೀವು ಖಂಡನೆ ವ್ಯಕ್ತಪಡಿಸಿದ್ದೀರಿ. ಆದರೆ, ಇದು ಸಾಲುವುದಿಲ್ಲ. ಇಂತಹ ಕೃತ್ಯ ಎಸಗಿದವರ ವಿರುದ್ಧ ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂದು ಪತ್ರದಲ್ಲಿ ಮೋದಿ ಅವರನ್ನು ಪ್ರಶ್ನಿಸಲಾಗಿತ್ತು.