– ವೃತ್ತಿ ಜೀವನದ ಆರಂಭದಲ್ಲೇ ಇದೆಂಥಾ ವಿಧಿಯಾಟ?
– ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪಾಸ್ ಮಾಡಿದ್ದ ಹರ್ಷಬರ್ದನ್
ಹಾಸನ: ಜೀಪ್ ಪಲ್ಟಿಯಾಗಿ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ದನ್ ಸಾವಿಗೀಡಾದ ಘಟನೆ ಪ್ರಕರಣ ಸಂಬಂಧ ಹಾಸನ ಗೊರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೀಪ್ ಚಾಲಕ ಮಂಜೇಗೌಡ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.
ಹೌದು. ಕೆಲ ದಿನಗಳ ಹಿಂದಷ್ಟೇ ಪೊಲೀಸ್ ಅಕಾಡೆಮಿಲ್ಲಿ ತರಬೇತಿ ಮುಗಿಸಿ ಕರ್ತವ್ಯಕ್ಕೆ ಹಾಜರಾಗುವ ವೇಳೆ ಯುವ ಐಪಿಎಸ್ ಅಧಿಕಾರಿ ಸಾವನ್ನಪ್ಪಿದ್ದಾರೆ. ಮೈಸೂರಿನಿಂದ (Mysuru) ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಬರುತ್ತಿದ್ದ ವೇಳೆ ಜೀಪ್ ಟಯರ್ ಸಿಡಿದು ವಾಹನ ಪಲ್ಟಿಯಾಗಿ ತೀವ್ರವಾಗಿ ಗಾಯಗೊಂಡಿದ್ದ 26 ವರ್ಷದ ಹರ್ಷಬರ್ದನ್ ಚಿಕಿತ್ಸೆ ಫಲಕಾರಿಯಾಗದೇ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಯುವ ಐಪಿಎಸ್ ಅಧಿಕಾರಿಯನ್ನು (IPS Officer) ಉಳಿಸಿಕೊಳ್ಳಲು ಹಿರಿಯ ಪೊಲೀಸ್ ಅಧಿಕಾರಿಗಳು ಶತಾಯಗತಾಯ ಹೋರಾಟ ನಡೆಸಿದರು ವಿಧಿ ಮೇಲಾಟ ನಡೆಸಿದೆ.
Advertisement
Advertisement
ಸಾವು ಎಲ್ಲಿ ಹೇಗೆ ಬರುತ್ತೆ? ಅಂತ ಒಂದು ಸಣ್ಣ ಸುಳಿವು ಆ ಯಮರಾಯ ಕೊಡಲ್ಲ. ಧೊಪ್ಪನೇ ಅಂತ ಜವರಾಯ ಎದುರುಗಡೆ ಬಂದು ಬಿಡ್ತಾನೆ. ಈ ಫೋಟೋದಲ್ಲಿರುವವರ ಹೆಸರು ಹರ್ಷಬರ್ದನ್ ಪ್ರೊಬೆಷನರಿ ಐಪಿಎಸ್ ಅಧಿಕಾರಿ. ಡ್ಯೂಟಿಗೆ ರಿಪೋರ್ಟ್ ಮಾಡಲು ಮೈಸೂರಿನಿಂದ ಹಾಸನಕ್ಕೆ ಬರುತ್ತಿದ್ದ ವೇಳೆ ನಡೆದ ಭೀಕರ ಅಪಘಾತದಲ್ಲಿ ದಾರುಣ ಅಂತ್ಯ ಕಂಡಿದ್ದಾರೆ. ವೃತ್ತಿ ಜೀವನದ ಆರಂಭದಲ್ಲೇ 25 ವರ್ಷದ ಹರ್ಷಬರ್ಧನ್ ಜೀವನದಲ್ಲಿ ವಿಧಿಯಾಟ ಕ್ರೂರ ನರ್ತನವಾಡಿದ್ದಾನೆ.
Advertisement
Advertisement
ಹಾಸನನದ ಕಿತ್ತಾನೆ ಗ್ರಾಮದ ಬಳಿ ನಡೆದ ಅಪಘಾತದಲ್ಲಿ ಯುವ ಅಧಿಕಾರಿ ಹರ್ಷಬರ್ದನ್ ದುರಂತ ಅಂತ್ಯ ಕಂಡಿದ್ದಾರೆ. ಅವಘಾತದಲ್ಲಿ ತಲೆ ತೀವ್ರವಾಗಿ ಗಾಯಗೊಂಡ ಹರ್ಷಬರ್ದನ್ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಹಾಸನದ ಎಸ್‌ಪಿ ಕಚೇರಿಯಲ್ಲಿ ಅಧಿಕಾರ ಸ್ವೀಕಾರಕ್ಕೆ ಆಗಮಿಸುತ್ತಿದ್ದ ವೇಳೆ ಈ ಅಪಘಾತ ನಡೆದಿದೆ. ಮೈಸೂರಿನ ಪೊಲೀಸ್ ಅಕಾಡೆಮಿಯಿಂದ ಹಾಸನದ ಕಡೆ ಬರುತ್ತಿದ್ದ ವೇಳೆ ಪೊಲೀಸ್ ಜೀಪು ಅಪಘಾತಕ್ಕೀಡಾಗಿದೆ. ಐಪಿಎಸ್ ವೃತ್ತಿ ಜೀವನ ಆರಂಭಿಸಿದ ಮೊದಲ ದಿನವೇ ಹರ್ಷಬರ್ದನ್ ಅಸುನೀಗಿದ್ದಾರೆ.
ಹರ್ಷಬರ್ಧನ್ ನಿನ್ನೆಯಷ್ಟೇ ಮೈಸೂರಿನ ಪೊಲೀಸ್ ಅಕಾಡೆಮಿಯಲ್ಲಿ ಟ್ರೇನಿಂಗ್ ಮುಗಿಸಿದ್ದರು. ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿ ಇವತ್ತು ಹಾಸನದಲ್ಲಿ ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಡಿವೈಎಸ್‌ಪಿಯಾಗಿ ಚಾರ್ಜ್ ತೆಗೆದುಕೊಳ್ಳಬೇಕಿತ್ತು. ಐಜಿಪಿ ಬೋರಲಿಂಗಯ್ಯ ರಿಪೋರ್ಟ್ ಮಾಡಿಕೊಂಡು ಹಾಸನಕ್ಕೆ ಜೀಪ್‌ನಲ್ಲಿ ಬರುತ್ತಿದ್ದರು. ಇನ್ನೇನು ಕೆಲವೇ ನಿಮಿಷಗಳಲ್ಲಿ ಹಾಸನ ತಲುಪಬೇಕು ಅನ್ನುವಷ್ಟರಲ್ಲಿ ದುರಂತ ಸಂಭವಿಸಿದೆ.
ಹಾಸನದ ಕಿತ್ತಾನೆ ಬಳಿ ಸಂಜೆ 4.30ರ ವೇಳೆಗೆ ಜೀಪ್‌ನ ಟೈರ್ ಸ್ಫೋಟಗೊಂಡಿದೆ. ಪರಿಣಾಮ ಜೀಪ್ ಮೂರು ಸುತ್ತು ಉರುಳಿದೆ. ಪಲ್ಟಿಯಾದ ರಭಸಕ್ಕೆ ಜೀಪ್ ನಜ್ಜುಗುಜ್ಜಾಗಿದೆ. ಅದರಲ್ಲಿ ಪ್ರಯಾಣಿಸುತ್ತಿದ್ದ ಹರ್ಷಬರ್ಧನ್ ತಲೆಗೆ ಹಾಗೂ ದೇಹದ ಇನ್ನಿತರ ಭಾಗಕ್ಕೆ ತೀವ್ರವಾಗಿ ಪೆಟ್ಟುಬಿದ್ದು ತೀವ್ರ ರಕ್ತಸ್ರಾವ ಆಗಿದೆ. ಚಾಲಕ ಮಂಜೇಗೌಡ ಎಂಬುವರಿಗೂ ಗಾಯಗಳಾಗಿವೆ. ಸ್ಥಳೀಯರು ಕೂಡಲೇ ರಕ್ತಸ್ರಾವವಾಗಿ ಬಿದ್ದಿದ್ದ ಅಧಿಕಾರಿ ಮತ್ತು ಚಾಲಕನನ್ನು 108 ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಿದ್ದಾರೆ.
ವೈದ್ಯರು ನಿರಂತರ ಚಿಕಿತ್ಸೆ ನೀಡಿದರೂ, ಹರ್ಷಬರ್ಧನ್ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣಲಿಲ್ಲ. ಬದಲಾಗಿ ಕ್ಷಣಕ್ಷಣಕ್ಕೂ ಆರೋಗ್ಯ ಹದಗೆಡುತ್ತಿತ್ತು. ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಒಂದು ಹಂತದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಜೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ಕರೆದೊಯ್ಯುವ ಚಿಂತನೆ ಮಾಡಿ ಆಂಬ್ಯುಲೆನ್ಸ್ ಸಹ ಕರೆಸಲಾಗಿತ್ತು. ಏನೆಲ್ಲ ಪ್ರಯತ್ನ ಮಾಡಿದರೂ ವಿಧಿಯಾಟದ ಮುಂದೆ ಏನೂ ನಡೀಲಿಲ್ಲ. ಚಿಕಿತ್ಸೆ ಫಲಕಾರಿಯಾಗದೇ ಹರ್ಷಬರ್ದನ್ ಪ್ರಾಣಪಕ್ಷಿ ಹಾರಿಹೋಗಿದೆ.
ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪಾಸ್:
ಅಂದ್ಹಾಗೆ ಐಎಎಸ್, ಐಪಿಎಸ್ ಆಗಬೇಕೆನ್ನುವುದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸು. ಯುಪಿಎಸ್‌ಸಿ ಪಾಸಾಗೊದು ಅಷ್ಟೊಂದು ಸುಲಭವಲ್ಲ. ಅದಕ್ಕೆ ತಕ್ಕಂತೆ ಗುರಿ ಇರಬೇಕು. ಛಲ ಬೇಕು. ಹರ್ಷಬರ್ದನ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದರು. ಹಗಲು ರಾತ್ರಿ ಎನ್ನದೇ ಓದಿ ಮೊದಲ ಪ್ರಯತ್ನದಲ್ಲೇ ಯುಪಿಎಸ್‌ಸಿ ಪಾಸ್ ಮಾಡಿದ್ದರು. ಮೂಲತಃ ಬಿಹಾರದ ಹರ್ಷಬರ್ದನ್ ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ವಾಸವಾಗಿದ್ದರು. ಮಧ್ಯಪ್ರದೇಶದಲ್ಲಿ ಎಂಜಿನಿಯರಿಂಗ್ ಪದವಿ ಪಡೆದು 2022-23ರ ಐಪಿಎಸ್ ಬ್ಯಾಚ್‌ನಲ್ಲಿ 153ನೇ ರ‍್ಯಾಂಕ್ ಪಡೆದು ತೇರ್ಗಡೆ ಹೊಂದಿದ್ದರು. ಕರ್ನಾಟಕ ಕೇಡರ್‌ನಲ್ಲಿ ರಾಜ್ಯಕ್ಕೆ ಆಯ್ಕೆಯಾಗಿದ್ದರು. ಮೃತರ ತಂದೆ ಕೂಡ ಐಎಎಸ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ನವೆಂಬರ್ 4ರಿಂದ ಪೊಲೀಸ್ ತರಬೇತಿ ಶುರುವಾಗಿ ಟ್ರೇನಿಂಗ್ ಮುಗಿಸಿ ಇವತ್ತು ಡಿವೈಎಸ್‌ಪಿಯಾಗಿ ಅಧಿಕಾರ ವಹಿಸಿಕೊಳ್ಳಬೇಕಿತ್ತು. ಆದರೆ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಯಮನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಇತ್ತ ಮಗನ ಸಾವಿನಿಂದ ಪೋಷಕರಿಗೆ ಬರಸಿಡಿಲು ಬಡಿದಂತಾಗಿದೆ. ದೊಡ್ಡ ಅಧಿಕಾರಿಯಾಗಿ ಹೆಸರು ಮಾಡಬೇಕೆನ್ನುವ ಕನಸು ಕಂಡು ಅದೇ ದಾರಿಯಲ್ಲಿದ್ದ ಹರ್ಷಬರ್ಧನ್ ದುರಂತ ಅಂತ್ಯ ಕಂಡಿದ್ದಾರೆ.