ಬೆಂಗಳೂರು: ವಿಚ್ಛೇದಿತ ಮಹಿಳೆಗೆ ಮದುವೆಯಾಗುವುದಾಗಿ ನಂಬಿಸಿ ವಂಚಿಸಿರುವ ಆರೋಪದಲ್ಲಿ ಖಾಸಗಿ ಶಾಲೆಯ ಕ್ರಿಕೆಟ್ ಕೋಚ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯ ಕ್ರಿಕೆಟ್ ಕೋಚ್ ಅಭಯ್ ಮ್ಯಾಥ್ಯೂ ಎಂಬಾತನ ಮೇಲೆ ಎಫ್‌ಐಆರ್ ದಾಖಲಾಗಿದೆ. ಶಾಲೆಯಲ್ಲಿ ಕ್ರಿಕೆಟ್ ಕೋಚ್ ಆಗಿ ಕೆಲಸ ಮಾಡುವ ಅಭಯ್ ಮ್ಯಾಥ್ಯೂಗೆ ಕಳೆದ ಎರಡು ವರ್ಷಗಳ ಹಿಂದೆ ಮದುವೆ ಆಗಿ ಡಿವೋಸ್ ಆಗಿರುವ ಮಹಿಳೆ ಪರಿಚಯವಾಗಿತ್ತು. ತನ್ನ ಮಗುವನ್ನು ಕ್ರಿಕೆಟ್ ಟ್ರೈನಿಂಗ್‌ಗೆ ಬಿಡೋಕೆ ಬಂದ ವೇಳೆ ಸಲುಗೆಯಿಂದ ಮಾತಾಡುತ್ತಿದ್ದ ಕೋಚ್ ಅಭಯ್ ಮ್ಯಾಥ್ಯೂ, ಮದುವೆ ಆಗೋದಾಗಿ ನಂಬಿಸಿದ್ದ. ಅದೇ ಸಲುಗೆಯಲ್ಲಿ ಹಲವು ಬಾರಿ ಮಹಿಳೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ.
ಈ ನಡುವೆ ಅದೊಂದು ದಿನ ಸಂತ್ರಸ್ತ ಮಹಿಳೆ ಅಭಯ್ ಮ್ಯಾಥ್ಯೂನ ಮೊಬೈಲ್ ನೋಡಿ ಶಾಕ್ ಆಗಿದ್ದಾಳೆ. ಯಾಕೆಂದರೆ, ಸಂತ್ರಸ್ತ ಮಹಿಳೆ ಸೇರಿದಂತೆ ಹಲವರು ಮಹಿಳೆಯರ ವಿಡಿಯೋಗಳನ್ನು ಈತ ಮೊಬೈಲ್‌ನಲ್ಲಿ ಸೆರೆ ಹಿಡಿದುಕೊಂಡಿದ್ದ. ಮೊಬೈಲ್‌ನಲ್ಲಿ ವಿಡಿಯೋಗಳನ್ನು ನೋಡಿದ ಸಂತ್ರಸ್ತ ಮಹಿಳೆ ಕೋಚ್ ಮ್ಯಾಥ್ಯೂ ಬಳಿ ಪ್ರಶ್ನೆ ಮಾಡಿದ್ದಾಳೆ. ಇದರಿಂದ ಕೋಪಗೊಂಡ ಕೋಚ್, ನಾನು ನಿನ್ನ ಮದುವೆ ಆಗಲ್ಲ, ಅದೇನ್ ಮಾಡ್ಕೋತಿಯೋ ಮಾಡ್ಕೋ ಅಂತಾ ಬೆದರಿಕೆ ಹಾಕಿ ಎಸ್ಕೇಪ್ ಆಗಿದ್ದಾನೆಂದು ಆರೋಪಿಸಲಾಗಿದೆ.
ಸಂತ್ರಸ್ತ ಮಹಿಳೆ ಈ ಬಗ್ಗೆ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾಳೆ. ಆ ದೂರಿನಲ್ಲಿ ಮಹಿಳೆಯ ಜೊತೆಗಿನ ಸಂಬಂಧ ಅಶ್ಲೀಲ ವಿಡಿಯೋಗಳು, ಮ್ಯಾಥ್ಯೂ ಮೊಬೈಲ್‌ನಲ್ಲಿರುವ ವಿಡಿಯೋಗಳ ಬಗ್ಗೆಯೂ ಉಲ್ಲೇಖ ಮಾಡಿದ್ದಾಳೆ. ಮಹಿಳೆಯರಷ್ಟೇ ಅಲ್ಲದೇ ಕೆಲ ಶಾಲಾ ಮಕ್ಕಳ ಜೊತೆಗೂ ಈತ ಇದೇ ರೀತಿ ನಡೆದುಕೊಂಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಸದ್ಯ ಆರೋಪಿಯ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದ್ದು, ಪೊಲೀಸರು ಕ್ರಿಕೆಟ್ ಕೋಚ್ ಅಭಯ್ ಮ್ಯಾಥ್ಯೂನ ಬಂಧನಕ್ಕೆ ಬಲೆ ಬೀಸಿದ್ದಾರೆ.