ಬೆಂಗಳೂರು: ಭೂ ಕಬಳಿಕೆಗೆ ಯತ್ನದ ಆರೋಪದ ಮೇಲೆ ಸಿಲಿಕಾನ್ ಸಿಟಿಯಲ್ಲಿ ಐವರು ಪೊಲೀಸರ ವಿರುದ್ಧ ಎಫ್‍ಐಆರ್ ದಾಖಲಾಗಿದೆ.
ಕೆ.ಆರ್.ಪುರಂ ಪೊಲೀಸ್ ಠಾಣೆ ಇಬ್ಬರು ಸಬ್ ಇನ್ಸ್ ಪೆಕ್ಟರ್, ಎಎಸ್‍ಐ, ಮುಖ್ಯ ಪೇದೆ ಮತ್ತು ಮಹಿಳಾ ಮುಖ್ಯ ಪೇದೆ ವಿರುದ್ಧ ಕೋರ್ಟ್ ಸೂಚನೆ ಮೇರೆಗೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ರೌಡಿಗಳ ಜೊತೆ ಕೆ.ಆರ್ ಪುರ ಪೊಲೀಸರು ಭೂ ಕಬಳಿಕೆ ಮಾಡಲು ಯತ್ನಿಸಿದ್ದಾರೆ ಎಂದು ಐವರ ವಿರುದ್ಧ ಆರೋಪಿಸಲಾಗಿತ್ತು.
ಏನಿದು ಪ್ರಕರಣ?:
ಪ್ರಭಾವತಿ ಎಂಬವರ ಮನೆಗೆ ರೌಡಿಗಳು ಅತಿಕ್ರಮಣ ಪ್ರವೇಶ ಮಾಡಿ ಮನೆ ಬಾಗಿಲು, ಗೃಹಪಯೋಗಿ ವಸ್ತುಗಳು ಧ್ವಂಸ ಮಾಡಲಾಗಿತ್ತು. ಈ ವೇಳೆ ರೌಡಿಗಳ ವಿರುದ್ಧ ದೂರು ನೀಡಲು ಪ್ರಭಾವತಿ ಕೆ.ಆರ್ ಪುರ ಪೊಲೀಸ್ ಠಾಣೆಗೆ ತೆರಳಿದ್ದರು. ಆದ್ರೆ ಪೊಲೀಸರು ದೂರು ಪಡೆಯಲು ಹಣ ನೀಡಬೇಕೆಂದು ಬೇಡಿಕೆ ಇಟ್ಟಿದ್ದರಂತೆ. ಹಣ ನೀಡಲು ನಿರಾಕರಿಸಿದಾಗ ಪೊಲೀಸರು ಕೂಡ ದೂರು ಪಡೆಯಲು ನಿರಾಕರಿಸಿದ್ದರು. ಅಲ್ಲದೇ ರೌಡಿಗಳಿಗೆ ಸಾಥ್ ನೀಡಿ ದೂರುದಾರರಿಗೆನೇ ಪೊಲೀಸರು ಜೀವಬೆದರಿಕೆ ಹಾಕಿದ್ದರು. ಪೊಲೀಸರು ದೂರು ಪಡೆಯಲು ವಿಫಲವಾದ ಹಿನ್ನೆಲೆಯಲ್ಲಿ ದೂರುದಾರೆ ಪ್ರಭಾವತಿ ಕೋರ್ಟ್ ಮೊರೆ ಹೋಗಿದ್ದರು.
ಆಸ್ತಿ ವಿಚಾರದಲ್ಲಿ ಪೊಲೀಸರು ಮಧ್ಯ ಪ್ರವೇಶ ಮಾಡಬಾರದು ಎಂದು ನ್ಯಾಯಾಲಯದ ಆದೇಶವಿದ್ದರೂ ಪೊಲೀಸರು ಆ ಆದೇಶವನ್ನು ನಿರ್ಲಕ್ಷ್ಯ ಮಾಡಿದ್ದರು. ಹೀಗಾಗಿ ಇದೀಗ ಎಫ್‍ಐಆರ್ ದಾಖಲಿಸಿ ಐವರ ವಿರುದ್ಧ ತನಿಖೆ ನಡೆಸುವಂತೆ ಕೋರ್ಟ್ ಸೂಚನೆ ನೀಡಿದೆ. ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹ್ಮದ್ ಗೆ 10 ಎಸಿಎಂಎಂ ನ್ಯಾಯಾಲಯ ಈ ಆದೇಶ ನೀಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv