ಬೆಂಗಳೂರು: ಫೈನಾನ್ಶಿಯರ್ ಕಿರುಕುಳಕ್ಕೆ (Financier Harassment) ನೊಂದು ಉದ್ಯಮಿ (Businessman) ನೇಣಿಗೆ ಶರಣಾದ ಘಟನೆ ರಾಜಾಜಿ ನಗರದ (Rajaji Nagar) ಪ್ರಕಾಶ್ ನಗರದಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಉದ್ಯಮಿಯನ್ನು ಅರುಣ್ ಎಂದು ಗುರುತಿಸಲಾಗಿದೆ. ಮೃತ ಅರುಣ್ ಸಣ್ಣಪುಟ್ಟ ಉದ್ಯಮ ನಡೆಸಿಕೊಂಡಿದ್ದರು. ಸುಮಾರು 20 ದಿನಗಳ ಹಿಂದೆ ತಮ್ಮ ಬಳಿ ಇದ್ದ ಕಾರನ್ನು ದಿನೇಶ್ ಎಂಬ ಫೈನಾನ್ಸಿಯರ್ ಬಳಿ ಅಡವಿಟ್ಟು 6 ಲಕ್ಷ ರೂ. ಹಣ (Money) ಪಡೆದಿದ್ದರು.
ದಿನೇಶ್ ಮೃತ ಅರುಣ್‌ಗೆ ಇದೇ ತಿಂಗಳು 22 ರಂದು ಹಣ ಮರುಪಾವತಿಸುವಂತೆ ಹೇಳಿ ಕೊಟ್ಟಿರುತ್ತಾರೆ. ಕೊಟ್ಟ ಡೆಡ್ ಲೈನ್ ಅಷ್ಟರಲ್ಲಿ 6 ಲಕ್ಷ ರೂ. ಹಣ ಹೊಂದಿಸಲು ಆಗಿರಲ್ಲ. 22 ರಂದು 1.5 ಲಕ್ಷ ಹಣ ಹೊಂದಿಸಿಕೊಂಡು ದಿನೇಶ್ ಕೊಡಲು ಹೋಗಿದ್ದಾರೆ. ನಿಗದಿತ ದಿನಾಂಕ ಪೂರ್ತಿ ಹಣ ಕೊಡದೆ ಇದ್ದ ಕಾರಣ ಅರುಣ್‌ಗೆ ನಿಂದಿಸಿ ಹಣ ಕೊಡೋದಕ್ಕೆ ಆಗದೇ ಇದ್ದರೆ ನೇಣು ಹಾಕಿಕೊಂಡು ಸಾಯಿ ಎಂದು ಕಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ದಿನೇಶ್ ನಡೆಯಿಂದ ನೊಂದಿದ್ದ ಅರುಣ್ ಮನೆಯಲ್ಲಿದ್ದ ಪತ್ನಿಯನ್ನು ಬೇರೆ ಕಡೆಗೆ ಕಳಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದಿನೇಶ್ ಕಿರುಕುಳದ ಬಗ್ಗೆ ಪತ್ನಿ ಬಳಿ ಅರುಣ್ ಹೇಳಿಕೊಂಡಿದ್ದರು ಎಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಈ ಸಂಬಂಧ ಮೃತರ ಮಗ ದಾಖಲಿಸಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹಣ ಕೊಟ್ಟವರಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಲು ಮುಂದಾಗಿದ್ದಾರೆ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.