ಬೆಳಗಾವಿ: ನೆರೆ ಪೀಡಿತ ಬೆಳಗಾವಿಯಲ್ಲಿ ರೈತರ ಕಷ್ಟ ಅವರಿಗಷ್ಟೇ ಗೊತ್ತು. ಒಂದೆಡೆ ಎಲ್ಲವನ್ನೂ ಕಳೆದುಕೊಂಡು ಬದುಕು ಬೀದಿಗೆ ಬಿದ್ದಿದೆ, ಇನ್ನೊಂದೆಡೆ ರಾಜ್ಯ ಸರ್ಕಾರದಿಂದ ಸರಿಯಾದ ಪರಿಹಾರ ಸಿಕ್ತಿಲ್ಲ. ಈ ನಡುವೆ ಸಾಲ ಕಟ್ಟಿಲ್ಲ ಎಂದು ಖಾಸಗಿ ಫೈನಾನ್ಸ್ ಕಂಪನಿ ರೈತರ ಟ್ರ್ಯಾಕ್ಟರ್ ಜಪ್ತಿ ಮಾಡಿದೆ.
ಹೌದು. ಸವದತ್ತಿ ತಾಲೂಕಿನ ಕಡಬಿ ಶಿವಾಪುರ ಗ್ರಾಮದ ರೈತರಾದ ಬಾಳಪ್ಪ ಮತ್ತು ರಾಮಪ್ಪ ಅವರು ಹಿಂದೂಜಾ ಫೈನಾನ್ಸ್‌ನಿಂದ ಸಾಲ ಪಡೆದಿದ್ದರು. ಸಾಲ ಕಟ್ಟದ ಕಾರಣಕ್ಕೆ ಫೈನಾನ್ಸ್ ಅವರು ರೈತರ ಟ್ರ್ಯಾಕ್ಟರ್‌ಗಳನ್ನು ಜಪ್ತಿ ಮಾಡಿಕೊಂಡು ಹೋಗಿದ್ದಾರೆ. ರೈತರಿಬ್ಬರು ಮೂರು ತಿಂಗಳಿಂದ ಲೋನ್ ಕಟ್ಟಿರಲಿಲ್ಲ. ಇತ್ತ ಪ್ರವಾಹದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಸಾಲ ವಸೂಲಾತಿಗೆ ಮೂರು ದಿನಗಳ ಹಿಂದೆಯಷ್ಟೇ ತಾತ್ಕಾಲಿಕ ತಡೆ ನೀಡಿದ್ದರು. ಆದರೆ ಜಿಲ್ಲಾಧಿಕಾರಿಗಳಿಗೆ ಕ್ಯಾರೇ ಎನ್ನದೆ ಜಮೀನಿಗೆ ನುಗ್ಗಿ 2 ಟ್ರ್ಯಾಕ್ಟರ್‌ಗಳನ್ನ ಫೈನಾನ್ಸ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.
Advertisement
Advertisement
ರಣ ಪ್ರವಾಹಕ್ಕೆ ತತ್ತರಿಸಿ ಹೋಗಿರುವ ಬೆಳಗಾವಿ ಮಂದಿ ಇನ್ನೂ ತಮ್ಮ ಬದುಕು ಕಟ್ಟಿಕೊಳ್ಳಲು ಕಷ್ಟ ಪಡುತ್ತಿದ್ದಾರೆ. ಅತ್ತ ಸರ್ಕಾರ ಕೂಡ ಸಂತ್ರಸ್ತರಿಗೆ ಪರಿಹಾರ ನೀಡಿಲ್ಲ. ಹೀಗಿರುವಾಗ ರೈತರು ಸಾಲ ಸೂಲ ಮಾಡಿ ಬೆಳೆದಿದ್ದ ಬೆಳೆಗಳು ಪ್ರವಾಹಕ್ಕೆ ಹಾನಿಯಾಗಿ ಹಣ ಕೊಟ್ಟವರಿಗೆ ಸಾಲ ಮರುಪಾವತಿ ಮಾಡಲು ಆಗದೆ ಕಂಗಾಲಾಗಿದ್ದಾರೆ. ಈ ನಡುವೆ ಸಾಲ ಕಟ್ಟಿ ಎಂದು ಮಾನವೀಯತೆ ಮರೆತ ಖಾಸಗಿ ಫೈನಾನ್ಸ್ ಕಂಪನಿಗಳು ರೈತರ ಮೇಲೆ ದೌರ್ಜನ್ಯ ನಡೆಸುತ್ತಿದೆ.