Bengaluru CityDistrictsHassanKarnatakaLatestMain Post

ಯಶವಂತಪುರ – ಹಾಸನ ಸೂಪರ್‍ಫಾಸ್ಟ್ ಇಂಟರ್ ಸಿಟಿ ಎಕ್ಸ್ ಪ್ರೆಸ್‍ಗೆ ಹಸಿರು ನಿಶಾನೆ

ಬೆಂಗಳೂರು: ಅಂತೂ ಇಂತೂ ಸುದೀರ್ಫ 21 ವರ್ಷಗಳಿಂದ ಜನರು ಕಾಯ್ತಿದ್ದ ರೈಲು ಬಂದೇ ಬಿಡ್ತು. ಬೆಂಳೂರಿನಿಂದ ಹಾಸನಕ್ಕೆ, ಹಾಸನದಿಂದ ಬೆಂಗಳೂರಿಗೆ ಇನ್ಮುಂದೆ ರೈಲಿನಲ್ಲೇ ಅದು ಕಡಿಮೆ ಟಿಕೆಟ್ ದರದಲ್ಲೇ ಪ್ರಯಾಣಿಸಬಹುದು.

122679/22680 ಸಂಖ್ಯೆಯ ಯಶವಂತಪುರ – ಹಾಸನ ಸೂಪರ್‍ಫಾಸ್ಟ್ ಇಂಟರ್ ಸಿಟಿ ಎಕ್ಸ್‍ಪ್ರೆಸ್ ರೈಲಿಗೆ ಇಂದು ಗ್ರೀನ್ ಸಿಗ್ನಲ್ ಸಿಕ್ಕಿದೆ. 1996ರಲ್ಲಿ ಒಪ್ಪಿಗೆ ಸೂಚಿಸಿದ್ದ ಯೋಜನೆಗೆ ಇಂದು ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡ, ಸಿಎಂ ಸಿದ್ದರಾಮಯ್ಯನ, ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಹೊಸ ರೈಲು ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿದ್ರು.

ವೆಚ್ಚ ಎಷ್ಟು?: ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಸಹಯೋಗದಲ್ಲಿ ಹೊಸ ರೈಲು ಮಾರ್ಗ ಸಿದ್ಧವಾಗಿದೆ. ಒಟ್ಟು 1289. 92 ಕೋಟಿ ರೂ. ವೆಚ್ಚದ ಈ ಯೋಜನೆಗೆ ರಾಜ್ಯ ಸರ್ಕಾರವು 467.21 ಕೋಟಿ ರೂಪಾಯಿ ಹಾಗೂ ಕೇಂದ್ರ ರೈಲ್ವೆ ಇಲಾಖೆ 822.71 ಕೋಟಿ ರುಪಾಯಿ ಖರ್ಚು ಮಾಡಿದೆ.

ಹಾಸನದಿಂದ ಚಿಕ್ಕಬಾಣವರ ನಿಲ್ದಾಣಗಳ ನಡುವಿನ ಹೊಸ ಬ್ರಾಡ್‍ಗೇಜ್ ಮಾರ್ಗವು ಚನ್ನಪಟ್ಟಣ, ಡಿ. ಸಮುದ್ರವಳ್ಳಿ, ಶಾಂತಿಗ್ರಾಮ, ಶ್ರವಣಬೆಳಗೋಳ, ಹಿರಿಸಾವೆ, ಬಾಲಗಂಗಾಧರನಗರ, ಯಡಿಯೂರು, ಕುಣಿಗಲ್, ತಿಪ್ಪಸಂದ್ರ, ಸೋಲೂರು ಹಾಗು ನೆಲಮಂಗಲ ಮೂಲಕ ಹಾದು ಹೋಗಲಿದೆ.

ಎಲ್ಲೆಲ್ಲಿ ಸ್ಟಾಪ್ ಕೊಡುತ್ತೆ?: ಚಿಕ್ಕಬಾಣಾವರ, ನೆಲಮಂಗಲ, ಕುಣಿಗಲ್, ಯಡಿಯೂರು, ಬಾಲಗಂಗಾಧರ ನಗರ, ಶ್ರವಣಬೆಳಗೊಳ, ಚನ್ನರಾಯಪಟ್ಟಣ ನಿಲ್ದಾಣದಲ್ಲಿ ಸ್ಟಾಪ್ ನೀಡಲಿದೆ. ಪ್ರತಿದಿನ ಹಾಸನದಿಂದ ಬೆಳಗ್ಗೆ 6.30ಕ್ಕೆ ಹೊರಟರೆ ಬೆಳಗ್ಗೆ 9.15ಕ್ಕೆ ಯಶವಂತಪುರ ತಲುಪಲಿದೆ. ಇನ್ನು ಯಶವಂತಪುರದಿಂದ ಸಾಯಂಕಾಲ 6.15ಕ್ಕೆ ರೈಲು ಹೊರಟರೆ ರಾತ್ರಿ 9 ಗಂಟೆಗೆ ಹಾಸನ ತಲುಪಲಿದೆ. ಈ ರೈಲು ಒಟ್ಟು 14 ಬೋಗಿಗಳನ್ನ ಒಳಗೊಂಡಿದ್ದು, 4 ದ್ವಿತೀಯ ದರ್ಜೆ ಚೇರ್ ಕಾರ ಬೋಗಿಗಳು, 8 ದೀನದಯಾಳ್ ಬೋಗಿಗಳು, 2 ದ್ವಿತೀಯ ದರ್ಜೆ ಲಗೇಜ್ ಬ್ರೇಕ್ ವ್ಯಾನ್ ಬೋಗಿಗಳನ್ನ ಹೊಂದಿದೆ.

ಇಷ್ಟೊಂದು ವಿಳಂಬವಾಗಿದ್ದು ಯಾಕೆ?: 1996ರಲ್ಲಿ ಪ್ರಧಾನಿಯಾಗಿದ್ದ ಹೆಚ್.ಡಿ ದೇವೇಗೌಡರಿಂದ ರೈಲು ಮಾರ್ಗಕ್ಕೆ ಒಪ್ಪಿಗೆ ನೀಡಿದ್ದರು. 1290 ಕೋಟಿ ರೂ. ವೆಚ್ಚದಲ್ಲಿ ಏಕಮುಖ ಸಂಚಾರ ರೈಲುಮಾರ್ಗಕ್ಕೆ ಶಂಕುಸ್ಥಾಪನೆಯಾಗಿತ್ತು. 2006ರಲ್ಲಿ ಹಾಸನ-ಶ್ರವಣಬೆಳಗೊಳ ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಓಡಾಟ ಆರಂಭವಾಯಿತು. ಜಮೀನು ವಿವಾದ, ಕೋರ್ಟ್ ತಗಾದೆ, ಹಣಕಾಸಿನ ಕೊರತೆಯಿಂದ ಕೆಲಸಕ್ಕೆ ಅಡ್ಡಿಯಾಯ್ತು. ಸೋಲೂರು-ತಿಪ್ಪಸಂದ್ರದ ಬಳಿ 14 ಎಕರೆ ವಿವಾದದಿಂದ 4 ಕಿ.ಮೀ ಕಾಮಗಾರಿ ಅಪೂರ್ಣವಾಗಿತ್ತು. ಕುಣಿಗಲ್ ಬಳಿ ವಿಜಯ್ ಮಲ್ಯ ಒಡೆತನದ 400 ಎಕರೆ ಜಾಗದಿಂದ ಮತ್ತೆ ವಿಳಂಬವಾಯ್ತು.

ಸೋಲೂರು-ತಿಪ್ಪಸಂದ್ರದ ಬಳಿ ಬೃಹತ್ ಬಂಡೆ- 1/2 ಕಿ.ಮೀ ಸುರಂಗ ಮಾರ್ಗ ಆಗಿದೆ. ಮೊದಲಿದ್ದ ಮಾರ್ಗ ಬೆಂಗಳೂರು-ಮೈಸೂರು-ಹಾಸನ-259 ಕಿ.ಮೀ ಇತ್ತು. ಮತ್ತೊಂದು ಮಾರ್ಗ ಬೆಂಗಳೂರು-ಅರಸಿಕೆರೆ-ಹಾಸನ-213 ಕಿ.ಮೀ ಇತ್ತು. ಈಗ ಹೊಸ ಮಾರ್ಗ ಬೆಂಗಳೂರು-ಕುಣಿಗಲ್-ಹಾಸನ-172 ಕಿ.ಮೀಗೆ ಇಳಿದಿದೆ.

ಟಿಕೆಟ್ ದರ :
1. ಸೂಪರ್ ಫಾಸ್ಟ್ ರೈಲು
> ಕಾರು ಬೋಗಿ-110 ರೂ
> ಸಾಮಾನ್ಯ ಬೋಗಿ-95 ರೂ

2. ಪ್ಯಾಸೇಂಜರ್ ರೈಲು
> 40 ರೂ-70 ರೂ

ಇಂಟರ್‍ಸಿಟಿ ರೈಲು : ಹಾಸನ-ಯಶವಂತಪುರ – ಬೆಳಗ್ಗೆ 6.15, ಬೆಳಗ್ಗೆ 9ಕ್ಕೆ

ಇಂಟರ್‍ಸಿಟಿ ರೈಲು: ಯಶವಂತಪುರ-ಹಾಸನ – ಸಂಜೆ 6.15, ರಾತ್ರಿ 9 ಕ್ಕೆ

ಪ್ಯಾಸೆಂಜರ್ ರೈಲು: ಯಶವಂತಪುರ-ಹಾಸನ – ಬೆಳಗ್ಗೆ 7.30, ಬೆಳಗ್ಗೆ 10.30ಕ್ಕೆ

ಪ್ಯಾಸೆಂಜರ್ ರೈಲು: ಹಾಸನ-ಯಶವಂತಪುರ – ಮಧ್ಯಾಹ್ನ 12, 3.30ಕ್ಕೆ

ಕುಡ್ಲಾ ಎಕ್ಸ್ ಪ್ರೆಸ್: ಯಶವಂತಪುರ-ಹಾಸನ-ಮಂಗಳೂರು ( ಸೋಮವಾರ, ಬುಧವಾರ, ಶುಕ್ರವಾರ ) ಯಶವಂತಪುರ-ಬೆಳಗ್ಗೆ 7ಕ್ಕೆ, ಹಾಸನಕ್ಕೆ ಬೆಳಗ್ಗೆ 9.45, ಮಂಗಳೂರಿಗೆ ಸಂಜೆ 4ಕ್ಕೆ ರೀಚ್

ಕುಡ್ಲಾ ಎಕ್ಸ್ ಪ್ರೆಸ್: ಮಂಗಳೂರು-ಹಾಸನ-ಯಶವಂತಪುರ (ಮಂಗಳವಾರ, ಗುರುವಾರ, ಶನಿವಾರ) ಮಂಗಳೂರಿನಿಂದ ಬೆಳಗ್ಗೆ 10.50ಕ್ಕೆ, ಹಾಸನಕ್ಕೆ ಸಂಜೆ- 4ಗಂಟೆಗೆ, ಯಶವಂತಪುರಕ್ಕೆ ರಾತ್ರಿ 7.50ಕ್ಕೆ

ನಿಲ್ದಾಣಗಳು: ಚಿಕ್ಕಬಾಣವಾರ-ನೆಲಮಂಗಲ, ಕುಣಿಗಲ್-ಯಡಿಯೂರು , ಆದಿಚುಂಚನಗಿರಿ-ಶ್ರವಣಬೆಳಗೊಳ, ಚನ್ನರಾಯಪಟ್ಟಣ-ಹಾಸನ

 

Leave a Reply

Your email address will not be published. Required fields are marked *

Back to top button