ಬೆಂಗಳೂರು: ನಟಿ ಶೃತಿ ಹರಿಹರನ್ ದೂರು ನೀಡಿದ 15 ಗಂಟೆಯ ನಂತರ ಪೊಲೀಸರು ಅರ್ಜುನ್ ಸರ್ಜಾ ಆಪ್ತ ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.
ಕಳೆದ ರಾತ್ರಿ ಪ್ರಶಾಂತ್ ಸಂಬರ್ಗಿ ವಿರುದ್ಧ ಶೃತಿ ದೂರು ದಾಖಲಿಸಿದ್ದರು. ಆದರೆ ಯಾವುದೇ ಎಫ್‍ಐಆರ್ ದಾಖಲಾಗಿರಲಿಲ್ಲ. ಶೃತಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದ ಪೊಲೀಸರು ಸಂಬರ್ಗಿ ವಿರುದ್ಧ ಎಫ್‍ಐಆರ್ ದಾಖಲಿಸದ್ದಕ್ಕೆ ಸಾರ್ವಜನಿಕ ವಲಯದಿಂದಲೂ ಟೀಕೆ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಎಫ್‍ಐಆರ್ ದಾಖಲಿಸದ್ದು ಎಷ್ಟು ಸರಿ ಎಂದು ಶುಕ್ರವಾರ ಬೆಳಗ್ಗೆಯಿಂದ ಸುದ್ದಿ ಪ್ರಸಾರಿಸಿತ್ತು. ಕೊನೆಗೆ ಈಗ ಹೈಗ್ರೌಂಡ್ಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಪ್ರಶಾಂತ್ ವಿರುದ್ಧ ಐಪಿಸಿ ಸೆಕ್ಷನ್ 506(ಬೆದರಿಕೆ), 509(ಮಹಿಳೆಗೆ ಅವಮಾನಿಸುವಂತೆ ಮಾತನಾಡುವುದು) ಅಡಿ ಎಫ್‍ಐಆರ್ ದಾಖಲಾಗಿದೆ.
ಶೃತಿ ಹರಿಹರನ್ ದೂರಿನಲ್ಲಿ ಏನಿತ್ತು?
ಫಿಲಂ ಚೇಂಬರ್ ನಲ್ಲಿ ಸಭೆ ನಡೆಯುತ್ತಿದ್ದ ವೇಳೆ ಫಿಲಂ ಚೇಂಬರ್ ಕಟ್ಟಡದ ಒಳಗೆ ಮತ್ತು ಹೊರಗೆ ನಮ್ಮ ಪ್ರಕರಣ ಸಂಬಂಧ ಪಡದ ಅನಪೇಕ್ಷಿತ ವ್ಯಕ್ತಿಗಳು ಜಮಾವಣೆಗೊಂಡಿದ್ದರು. ಈ ಸಂದರ್ಭ ದುರ್ಬಳಕೆ ಮಾಡಿಕೊಂಡ ಪ್ರಶಾಂತ್ ಸಂಬರ್ಗಿ ಎಂಬ ವ್ಯಕ್ತಿ ಗೂಂಡಾಗಳ ಜೊತೆ ಜಮಾವಣೆಗೊಂಡಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಶಾಂತ್ ಸಂಬರ್ಗಿ, ಅವಳು ಶೃತಿ ಹರಿಹರನ್ ಹಿಂದೂ ಜನರ ಭಾವನೆಗಳಿಗೆ ಧಕ್ಕೆ ತರುವಂತೆ ವರ್ತಿಸಿದ್ದಾಳೆ ಎಂದು ಹೇಳಿದ್ದಾರೆ. ಇದು ನನ್ನನ್ನು ಧರ್ಮವೊಂದಕ್ಕೆ ಎತ್ತಿಕಟ್ಟುವ ಅಪರಾಧವಾಗಿರುತ್ತದೆ. ಮುಂದುವರಿದು ವಿದೇಶಿ ಹಣದಲ್ಲಿ ಮಾಧ್ಯಮಗಳಿಗೆ ಹಣ ನೀಡಿ ಮಹಿಳಾ ದೌರ್ಜನ್ಯ ವಿರೋಧಿ ಸುದ್ದಿಗಳನ್ನು ಮಾಡಿದ್ದಾಳೆ ಎಂದು ಆರೋಪಿಸಿದ್ದಾರೆ. ಇದು ಆಧಾರ ರಹಿತ ಆರೋಪವಾಗಿದ್ದು ನನ್ನ ಮತ್ತು ಮಾಧ್ಯಮಗಳ ತೇಜೋವಧೆ ಮಾಡುವ ಕೃತ್ಯವಾಗಿರುತ್ತದೆ.
ಅಷ್ಟೇ ಅಲ್ಲದೇ ಪ್ರಶಾಂತ್ ಸಂಬರ್ಗಿ ಶೃತಿ ಹರಿಹರನ್ ಬಳಸುವ 3 ಫೇಸ್‍ಬುಕ್‍ಗಳ ಐಪಿ ಅಡ್ರೆಸ್ ಬಗ್ಗೆ ಸಂಪೂರ್ಣ ಮಾಹಿತಿ ನನ್ನ ಬಳಿ ಇದೆ ಎಂದು ಹೇಳಿದ್ದಾರೆ. ಇದು ನನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ. ನಾನು ಯಾವುದೇ ಕಾರಣಕ್ಕೂ ಶೃತಿ ಹರಿಹರನ್ ಅವಳನ್ನು ಬಿಡುವುದಿಲ್ಲ ಎಂದಿದ್ದಾರೆ. ಏಕವಚನದಲ್ಲಿ ನಿಂದಿಸಿ ನನ್ನ ಘನತೆಯ ಬದುಕಿಗೆ ಅಡ್ಡಿಯಾಗಿದ್ದಲ್ಲದೆ, ಕೊಲೆ ಬೆದರಿಕೆ ಒಡ್ಡಿದ್ದಾರೆ. ಇದಲ್ಲದೆ ನಾನು ಆರೋಪಿಸಲ್ಪಟ್ಟ ವ್ಯಕ್ತಿ ಕೂಡ ನಟನಾಗಿರೋದ್ರಿಂದ ಅವರ ಅಭಿಮಾನಿಗಳಿಗೆ ನನ್ನ ವಿರುದ್ಧ ಕೊಲೆ, ಹಲ್ಲೆಯ ಪ್ರಚೋದನೆ ಮಾಡಿದ್ದಾರೆ. ಸೂಕ್ತ ಕ್ರಮ ಕೈಗೊಂಡು, ನನಗೆ ರಕ್ಷಣೆ ಕೊಡುವಂತೆ ಕೋರುತ್ತೇನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv