ಮಂಗಳೂರು: ಜೋಡುಪಾಲದ 2ನೇ ಮೊಣ್ಣಂಗೇರಿ ನಿವಾಸಿ 60ರ ವೃದ್ಧೆ ಗಿರಿಜಾ ಎಂಬವರು ನನ್ನ ಪರಿಸ್ಥಿತಿ ಬೆಂಗಳೂರಿನಲ್ಲಿರುವ ಮಗಳಿಗೆ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದು, ಕೊನೆಗೂ ಈಗ ಮಗಳು ತಾಯಿ ಸಂಪರ್ಕಕ್ಕೆ ಸಿಕ್ಕಿದ್ದಾರೆ.
ಜೋಡುಪಾಲ ದುರಂತದಲ್ಲಿ ಗಿರಿಜಾ ಅವರು ತನ್ನ ಮಗಳಿಗಾಗಿ ಬೇಡಿಕೊಂಡಿದ್ದರು. ಗಿರಿಜಾ ಭೂ ಕುಸಿತದಲ್ಲಿ ಮನೆ ಕಳೆದುಕೊಂಡು ಏಕಾಂಗಿಯಾಗಿದ್ದರು. ಸದ್ಯ ಮಗಳು ಲತಾಮಣಿ ಮಾಧ್ಯಮಗಳ ವರದಿಯನ್ನು ನೋಡಿ ತಾಯಿಯನ್ನು ಸಂಪರ್ಕಿಸಿದ್ದಾರೆ.
ಲತಾಮಣಿ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಹೋಮ್ ನರ್ಸ್ ಆಗಿದ್ದಾರೆ. ಅಲ್ಲದೇ ಅವರ ತಾಯಿ ಗಿರಿಜಾ ಕೊಡಗಿನ ಗಡಿಭಾಗ ಸುಳ್ಯ ತಾಲೂಕಿನ ಸಂಪಾಜೆಯ ಪರಿಹಾರ ಕೇಂದ್ರದಲ್ಲಿದ್ದಾರೆ. ಇದನ್ನೂ ಓದಿ: ನನ್ನ ಪರಿಸ್ಥಿತಿಯನ್ನು ಬೆಂಗ್ಳೂರಿನಲ್ಲಿರುವ ಮಗಳಿಗೆ ತಿಳಿಸಲು ಸಾಧ್ಯವೇ- ವೃದ್ಧೆಯ ಅಳಲು
ಏನಿದು ಘಟನೆ?
ಗಿರಿಜಾರ ಮಗಳು ಲತಾಮಣಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಆಕೆಗೆ ನನ್ನ ಪರಿಸ್ಥಿತಿ ಬಗ್ಗೆ ತಿಳಿಹೇಳಿ ಎಂದು ಮನವಿ ಮಾಡಿಕೊಂಡಿದ್ದರು. ಮೊಣ್ಣಂಗೇರಿಯ ಮನೆಯಲ್ಲಿ ನಾನೊಬ್ಬಳೇ ವಾಸವಿದ್ದು, ನೋಡನೋಡುತ್ತಲೇ ಕಲ್ಲು ಬಂಡೆಗಳು ನೀರಿನೊಂದಿಗೆ ಉರುಳಿ ಬಂದು ತನ್ನ ಮನೆಯನ್ನು ಸೀಳಿಕೊಂಡು ಹೋಯಿತು. ಕೆಲಹೊತ್ತಿನಲ್ಲಿ ಕಾಡಿನಿಂದ ಆನೆಗಳು ಘೀಳಿಟ್ಟವು. ಬೆಳಗಿನವರೆಗೂ ಅಲ್ಲೆ ಪಕ್ಕದಲ್ಲಿ ಕೂತು, ಆರು ಗಂಟೆಗೆ ಇಳಿದು ಬಂದಿದ್ದೇನೆ ಎಂದು ಹೇಳಿದ್ದರು.
ನನ್ನ ಮಗಳು ಲತಾಮಣಿ ಬೆಂಗಳೂರಿನಲ್ಲಿ ಕೆಲಸದಲ್ಲಿ ಇದ್ದಾಳೆ. ಲತಾಳನ್ನು ಸಂಪರ್ಕಿಸಲು ಮೊಬೈಲ್ ನಂಬರ್ ಗೊತ್ತಿಲ್ಲ. ಏನು ಕೆಲಸ ಅನ್ನೋದೂ ಗೊತ್ತಿಲ್ಲ. ನನಗೆ ಹೀಗಾಗಿದ್ದು ಮಗಳಿಗೆ ಗೊತ್ತಿರಲಿಕ್ಕಿಲ್ಲ ಅಂತಾ ಅಲವತ್ತುಕೊಂಡಿದ್ದರು. ಸದ್ಯಕ್ಕೆ ಗಿರಿಜಾ ಸಂಪಾಜೆಯ ಪರಿಹಾರ ಕೇಂದ್ರದಲ್ಲಿದ್ದು, ಬೆಂಗಳೂರಿನ ಮಂದಿ ನನ್ನ ಪರಿಸ್ಥಿತಿಯನ್ನು ಮಗಳಿಗೆ ತಿಳಿಸಲು ಸಾಧ್ಯವೇ ಅಂತಾ ಕೇಳಿಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv