ಬೆಳಗ್ಗೆ 10ರವರೆಗೆ ಶಿವರಾಂ ಅಂತಿಮ ದರ್ಶನಕ್ಕೆ ವ್ಯವಸ್ಥೆ

Public TV
2 Min Read
SHIVARAM 3

ಬೆಂಗಳೂರು: ನಿನ್ನೆ ನಮ್ಮನಗಲಿದ ಚಂದನವನದ ಶರಪಂಜರ ಶಿವರಾಂ ಅವರ ಪಾರ್ಥಿವ ಶರೀರವನ್ನು ಬನಶಂಕರಿ ನಿವಾಸದಿಂದ ರವೀಂದ್ರ ಕಲಾಕ್ಷೇತ್ರಕ್ಕೆ ಕೊಂಡೊಯ್ಯಲಾಗುತ್ತದೆ. ಬೆಳಗ್ಗೆ ಬೆಳಗ್ಗೆ 7.30 ರಿಂದ ಬೆಳಗ್ಗೆ 10 ಗಂಟೆ ತನಕ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. 11 ಗಂಟೆ ನಂತರ ಬನಶಂಕರಿ ಚಿತಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದ ಅನುಸಾರ ಅಂತಿಮ ಸಂಸ್ಕಾರ ನಡೆಸಲು ಕುಟುಂಬಸ್ಥರು ನಿರ್ಧರಿಸಿದ್ದಾರೆ. ಶಿವರಾಮಣ್ಣನಿಗೆ ಪೊಲೀಸ್ ಗೌರವದ ವಿದಾಯ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

SHIVARAM 5

ನಿನ್ನೆ ಬನಶಂಕರಿಯ ನಿವಾಸದಲ್ಲಿ ಚಿತ್ರರಂಗದ ಹಿರಿ-ಕಿರಿಯ ಕಲಾವಿದರೆಲ್ಲರೂ ಕೂಡ ಶಿವರಾಮಣ್ಣಗೆ ಅಂತಿಮ ನಮನ ಸಲ್ಲಿಸಿದ್ರು. ದ್ವಾರಕೀಶ್, ಶ್ರೀನಾಥ್, ಅನಂತನಾಗ್, ಜಗ್ಗೇಶ್, ನಿರ್ದೇಶಕ ಭಗವಾನ್, ಶಿವಣ್ಣ, ರಾಘಣ್ಣ, ದೇವರಾಜ್, ರಮೇಶ್ ಅರವಿಂದ್, ಪ್ರೇಮಾ, ಉಮಾಶ್ರೀ, ಗಿರಿಜಾ ಲೋಕೇಶ್, ಸುಂದರರಾಜ್, ಯೋಗರಾಜ್ ಭಟ್, ಕ್ರಿಕೆಟಿಗ ಅನಿಲ್ ಕುಂಬ್ಳೆ ಸೇರಿದಂತೆ ಹಲವರು ಶಿವರಾಮಣ್ಣನನ್ನು ಸ್ಮರಿಸಿ ಕಂಬನಿ ಮಿಡಿದ್ರು.

SHIVARAM 1 1

ಕನ್ನಡಚಿತ್ರರಂಗದ ಮೂರು ತಲೆಮಾರುಗಳನ್ನು ಕಂಡಿದ್ದ ಶಿವರಾಂ ಹಿರಿಯ ನಟನಾಗಿ ಮಾತ್ರವಲ್ಲ, ಸಿನಿಮಾ ಕುಟುಂಬಕ್ಕೆ ಹಿರಿಯರ ಸ್ಥಾನದಲ್ಲಿದ್ದು ನಿಜ ಪೋಷಕರೆನಿಸಿದ್ದರು. ಎಲ್ಲರ ಪಾಲಿಗೆ ಪ್ರೀತಿಯ ಶಿವರಾಮಣ್ಣ ಆಗಿದ್ದರು. ಇದೀಗ ಶಿವರಾಂ ಅಗಲಿಕೆಯಿಂದ ಕನ್ನಡ ಚಿತ್ರರಂಗ ಅಕ್ಷರಶಃ ಅನಾಥವಾಗಿದೆ. ವಿಷಾದದ ಕಡಲಲ್ಲಿ ಮುಳುಗಿದೆ. ಇದನ್ನೂ ಓದಿ: ಸಾಮಾನ್ಯ ವ್ಯಕ್ತಿಯಲ್ಲ ಶಿವರಾಂ, ಅವರಂತೆ ಯಾರು ಮತ್ತೆ ಹುಟ್ಟಿ ಬರಲು ಸಾಧ್ಯವಿಲ್ಲ: ದ್ವಾರಕೀಶ್

SHIVARAM 2

ಕರ್ನಾಟಕ-ತಮಿಳುನಾಡು ಗಡಿಭಾಗದ, ಬೆಂಗಳೂರಿನಿಂದ 60 ಕಿಲೋಮೀಟರ್ ದೂರದ ಚೂಡಸಂದ್ರದಲ್ಲಿ 1938ರ ಜನವರಿ 28ರಂದು ಜನಿಸಿದ ಶಿವರಾಂ ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಪೂರೈಸಿದರು. ನಂತರ ಅವರು ಸೇರಿದ್ದು ಬೆಂಗಳೂರು ಎಂಬ ಮಾಯನಗರಿಯನ್ನು. ಮೊದಲು ನಾಟಕಗಳಲ್ಲಿ ಅಭಿನಯಿಸುತ್ತಾ ಬೆಳ್ಳಿ ತೆರೆಗೂ ಎಂಟ್ರಿ ಕೊಟ್ಟರು. 1958ರಲ್ಲಿ ಮೊದಲ ಬಾರಿಗೆ ಬೆರೆತ ಜೀವ ಸಿನಿಮಾದಲ್ಲಿ ಬಣ್ಣ ಹಚ್ಚಿದರು. ಸುಮಾರು ಆರು ದಶಕಗಳ ಸುದೀರ್ಘ ಸಿನಿಮಾ ಜೀವನದಲ್ಲಿ ಅವರು ನಿರ್ವಹಿಸದ ಪಾತ್ರವಿಲ್ಲ.

SHIVARAM

ಗುರು ಶಿಷ್ಯರು, ಶರಪಂಜರ, ನಾಗರಾಹಾವು, ದೇವರಗುಡಿ, ಎಡಕಲ್ಲು ಗುಡ್ಡದ ಮೇಲೆ, ಚಲಿಸುವ ಮೋಡಗಳು, ಹಾಲುಜೇನು, ಹೊಂಬಿಸಲು, ಶುಭಮಂಗಳ.. ಉಪಾಸನೆ, ಡ್ರೈವರ್ ಹನುಮಂತು, ಬನಶಂಕರಿ.. ತಾಯಿ ಸಾಹೇಬ, ಅವರ ಸಿನಿಮಾಗಳ ಬಗ್ಗೆ ಹೇಳಲು ಒಂದೇ ಎರಡೇ ಸೇರಿ ನೂರಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಗೃಹಭಂಗ, ಬದುಕು, ಚಕ್ರ, ಇತ್ತೀಚಿಗೆ ಬಂದ ಸತ್ಯ ಸೇರಿ ಧಾರವಾಹಿಗಳಿಗೂ ಜೀವ ತುಂಬಿದ್ದಾರೆ.

SHIVARAM 4

ಕ್ಯಾಮೆರಾ ಸಹಾಯಕರಾಗಿ, ಸಹಾಯ ನಿರ್ದೇಶಕರಾಗಿ , ನಿರ್ದೇಶಕರಾಗಿ, ನಿರ್ಮಾಪಕರಾಗಿ ಚಂದನವನದ ನಿಜ ಅರ್ಥದಲ್ಲಿ ಪೋಷಕರೆನಿಸಿದ್ದರು. ಹಿರಿಯನಟ ಶಿವರಾಂ ಅಭಿನಯದ ಕೊನೇ ಚಿತ್ರ ಆವರ್ತ. ಈ ಸಿನಿಮಾದಲ್ಲಿ ನರೇಂದ್ರನಾಥ ಬಲ್ಲಾಳ ಅನ್ನೊ ಪಾತ್ರದಲ್ಲಿ ಶಿವರಾಂ ಕಾಣಿಸಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *