ಉಡುಪಿ: ನಗರದ ಹೊರವಲಯದಲ್ಲಿರುವ ಮಂಚಿ ಮೂಲ ಸ್ಥಾನದ ಸಮೀಪ ಮನೆ ಕಂಪೌಂಡಿನ ಆವರಣದೊಳಗೆ ಬಿದ್ದುಕೊಂಡಿದ್ದ ರಾಷ್ಟ್ರಪಕ್ಷಿ ನವಿಲನ್ನು ಸಾಮಾಜಿಕ ಕಾರ್ಯಕರ್ತರು ಅರಣ್ಯ ಇಲಾಖೆಗೆ ಹಸ್ತಾಂತರಿಸಿ, ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ರಾತ್ರಿ 8 ಗಂಟೆ ಸುಮಾರಿಗೆ ಮಂಚಿ ಸಮೀಪ ಎಮ್.ಎಮ್ ಗೌಸ್ ಅವರ ಮನೆ ಕಂಪೌಂಡಿನ ಆವರಣದೊಳಗೆ ಗಂಡು ನವಿಲು ಬಿದ್ದುಕೊಂಡಿದೆ ಎನ್ನುವ ಮಾಹಿತಿ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರಿಗೆ ದೊರೆಯಿತು.
Advertisement
Advertisement
ವಿಶು ಶೆಟ್ಟಿ ಸಾಮಾಜಿಕ ಕಾರ್ಯಕರ್ತ ತಾರಾನಾಥ್ ಮೇಸ್ತ ಜೊತೆಗೂಡಿ ವಾಹನದಲ್ಲಿ ಜಾಗರೂಕತೆಯಿಂದ ತಂದು ಚಿಕಿತ್ಸೆಗಾಗಿ ಪಶು ವೈದ್ಯ ಡಾ. ಸಂದೀಪ್ ಶೆಟ್ಟಿ ಅವರಿಗೆ ತೋರಿಸಿ ಚಿಕಿತ್ಸೆ ಕೊಡಿಸಿದರು. ಆ ಸಮಯದಲ್ಲಿ ನವಿಲಿನ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ಚಿಕಿತ್ಸೆಗೆ ಸ್ಪಂದಿಸದೆ ನವಿಲು ಮೃತಪಟ್ಟಿತು. ಅದೇ ದಿನ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಮೃತ ನವಿಲನ್ನು ಅರಣ್ಯರಕ್ಷಕ ಡಿ. ದೇವರಾಜ್ ಪಾಣ ಅವರಿಗೆ ಹಸ್ತಾಂತರಿಸಲಾಯಿತು.
Advertisement
ಉಡುಪಿ ಅರಣ್ಯ ಇಲಾಖೆಯ ವಠಾರದಲ್ಲಿ ನವಿಲಿನ ಶವ ಪರೀಕ್ಷೆಯನ್ನು ಪಶು ವೈದ್ಯಾಧಿಕಾರಿ ಡಾ. ಸಂದೀಪ್ ಶೆಟ್ಟಿ ನೆಡೆಸಿದರು. ನವಿಲಿನ ಯಕೃತ್ (ಲಿವರ್) ಭಾಗ ಘಾಸಿಗೊಂಡಿದ್ದು, ಕೆಲವು ಅಂಗಾಗಗಳಿಂದ ರಕ್ತಸ್ತ್ರಾವಗೊಂಡಿದ್ದವು. ಕೆಲವು ದಿನಗಳಿಂದ ಆಹಾರ ಸೇವನೆ ಮಾಡದೆ ಇರುವುದೇ ನವಿಲಿನ ಸಾವಿಗೆ ಕಾರಣ ಅಂತಾ ಶವಪರೀಕ್ಷೆಯಿಂದ ದೃಢಪಟ್ಟಿದೆ.
Advertisement
ಶವಪರೀಕ್ಷೆ ಹಾಗೂ ಕಾನೂನು ಪ್ರಕ್ರಿಯೆಗಳು ನಡೆದ ನಂತರ ಆದಿ-ಉಡುಪಿ ಅರಣ್ಯ ಇಲಾಖೆಯ ಆಶ್ರಯದಲ್ಲಿರುವ ಪ್ರಾಣಿಗಳ ಕಳೇಬರ ದಹನ ಭೂಮಿಯಲ್ಲಿ ಅರಣ್ಯವಿಕ್ಷಕ ಸಿಬ್ಬಂದಿಯ ಸಮಕ್ಷಮದಲ್ಲಿ ಕಾನೂನು ಗೌರವದೊಂದಿಗೆ ದಹನ ಮಾಡುವ ಮುಖಾಂತರ ಅಂತ್ಯಸಂಸ್ಕಾರ ನಡೆಸಲಾಯಿತು. ವಿಶು ಶೆಟ್ಟಿ ಮತ್ತು ತಾರಾನಾಥ್ ಮೇಸ್ತರು ನವಿಲಿನ ಕಳೇಬರಕ್ಕೆ ಬಿಳಿ ಬಟ್ಟೆ ಹೊದಿಸಿ, ಹೂಹಾರ ಸಮರ್ಪಿಸಿ ರಾಷ್ಟ್ರಪಕ್ಷಿಗೆ ಅಂತಿಮ ಗೌರವ ಸಲ್ಲಿಸಿದರು.