– ದಕ್ಷಿಣ ಕನ್ನಡ ಜಿಲ್ಲೆಯ ಸಂಪಾಜೆ ಗ್ರಾಮದಲ್ಲಿ ಘಟನೆ
– 6 ಜನರಿಂದ ಕೃತ್ಯ, 5.50 ಲಕ್ಷ ದೋಚಿದ ಕಳ್ಳರು
ಮಂಗಳೂರು: ಎಳನೀರು ಕೊಚ್ಚುವ ಮಚ್ಚು ಹಿಡಿದು ಮನೆಗೆ ಎಂಟ್ರಿ, ಮನೆಯವರ ಬಾಯಿಗೆ ಪ್ಲಾಸ್ಟರ್ ತುರುಕಿ ಬೆದರಿಕೆ, ಕತ್ತಿನಿಂದಲೇ ಮಾಂಗಲ್ಯ ಸರ ಕಳ್ಳತನ, ಹಿರಿಯ ಮಹಿಳೆಯ ಕತ್ತಿಗೆ ಕತ್ತಿಯನ್ನು ಹಿಡಿದು ಹಣ ನೀಡುವಂತೆ ಬೆದರಿಕೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದಲ್ಲಿ ಸಿನಿಮಾ ಸ್ಟೈಲ್ ದರೋಡೆ ನಡೆದಿದೆ. ಮಾ.21ರ ಭಾನುವಾರ ರಾತ್ರಿ 6 ಮಂದಿ ದರೋಡೆಕೋರರು ಅಂಬರೀಶ್ ಭಟ್ ಅವರ ನಿವಾಸ ʼಅಂಬಾಶ್ರಾಮʼಕ್ಕೆ ನುಗ್ಗಿ ಕೃತ್ಯ ಎಸಗಿದ್ದು ಗ್ರಾಮದ ಜನತೆ ಬೆಚ್ಚಿ ಬಿದ್ದಿದ್ದಾರೆ.
ದರೋಡೆಕೋರರು ಒಟ್ಟು 4 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು 1.5 ಲಕ್ಷ ರೂ. ನಗದು ಸೇರಿ ಒಟ್ಟು 5.50 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಕದ್ದು ಪರಾರಿಯಾಗಿದ್ದಾರೆ. ಈ ಸಂಬಂಧ ಸುಳ್ಯ ಠಾಣೆಯಲ್ಲಿ ಐಪಿಸಿ ಸೆಕ್ಷನ್ 395(ದರೋಡೆ) ಅಡಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಮೂರು ವರ್ಷಗಳಲ್ಲಿ ಅನುಭವ ಮಂಟಪ ನಿರ್ಮಾಣ: ಆರ್. ಅಶೋಕ್
ಅಂಬರೀಶ್ ಭಟ್ ಗ್ರಾಮದಲ್ಲಿ ಪೌರೋಹಿತ್ಯ ಉದ್ಯೋಗದ ಜೊತೆ ಜ್ಯೋತಿಷ್ಯ ಹೇಳುತ್ತಿದ್ದಾರೆ. ಭಾನುವಾರ ಸಂಜೆ ಅಂಬರೀಶ್ ಭಟ್ ಪುತ್ರ ಶ್ರೀವತ್ಸ ಜೊತೆ ಮದೆನಾಡು ಗ್ರಾಮಕ್ಕೆ ಕೆಲಸದ ನಿಮಿತ್ತ ತೆರಳಿದ್ದರು. ಈ ಸಂದರ್ಭದಲ್ಲಿ ಮನೆಯಲ್ಲಿ ಅಂಬರೀಶ್ ಭಟ್ ಪತ್ನಿ ಪುಷ್ಪಾ, ಸೊಸೆ ಆಶಾ, ತಂದೆ ಗೋವಿಂದ ಭಟ್, ತಾಯಿ ಸರಸ್ವತಿ ಮತ್ತು ಇಬ್ಬರು ಮೊಮ್ಮಕ್ಕಳು ಇದ್ದರು.
ದರೋಡೆ ಹೇಗಾಯ್ತು?
ರಾತ್ರಿ 8:30ರ ವೇಳೆಗೆ ಹೊರಗಡೆ ನಾಯಿ ಬೊಗಳುವ ಸದ್ದು ಕೇಳಿ ಚಾವಡಿಯ ಬಳಿ ಆಶಾ ಬಂದಿದ್ದಾರೆ. ಈ ವೇಳೆ ಮುಖಕ್ಕೆ ಮಾಸ್ಕ್, ಕೈಗೆ ಗ್ಲೌಸ್ ಹಾಗೂ ಮಾರಕಾಸ್ತ್ರಗಳನ್ನು ಹಿಡಿದಿದ್ದ 3 ಮಂದಿ ದರೋಡೆಕೋರರನ್ನು ಕಂಡು ಗಾಬರಿಯಾಗಿದ್ದಾರೆ. ದರೋಡೆಕೋರರಲ್ಲಿ ಒಬ್ಬಾತ ನೇರವಾಗಿ ಆಶಾ ಅವರ ಬಳಿ ಬಂದು ಮಾಂಗಲ್ಯ ಸರವನ್ನು ಹಿಡಿದು ಎಳೆದಿದ್ದಾನೆ.
ಈ ವೇಳೆ ಏನು ನಡೆಯುತ್ತಿದೆ ಎಂದು ನೋಡಲು ಗೋವಿಂದ ಭಟ್, ಸರಸ್ವತಿ ಬಂದಿದ್ದಾರೆ. ಈ ವೇಳೆ ಸರಸ್ವತಿ ಅವರನ್ನು ಬೀಳಿಸಿದ ದರೋಡೆಕೋರ ಮಾರಕಾಸ್ತ್ರವನ್ನು ಕತ್ತಿನ ಬಳಿ ಹಿಡಿದು ಹಣ ಎಲ್ಲಿ ಎಂದು ಬೆದರಿಸಿ ಕೇಳಿದ್ದಾನೆ.
ಗಾಬರಿಯಾದ ಮನೆ ಸದಸ್ಯರು ಹಣ, ಚಿನ್ನ ಇರುವ ಜಾಗವನ್ನು ತೋರಿಸಿದ್ದಾರೆ. ಬಳಿಕ ಗೋವಿಂದ ಭಟ್ ಅವರ ಬಾಯಿಗೆ ಪ್ಲಾಸ್ಟರ್ ಹಚ್ಚಿ, ಮನೆಯಲ್ಲಿದ್ದ ಎಲ್ಲಾ ಸದಸ್ಯರನ್ನೂ ಊಟದ ಕೋಣೆಯಲ್ಲಿ ಕೂರಿಸಿ, ಕೂಡಿ ಹಾಕಿದ್ದಾರೆ. ನಂತರ ಅಂಬರೀಶ್ ಭಟ್ ಪತ್ನಿ ಪುಷ್ಪಾ ಕೈಯಿಂದಲೇ ಬಲವಂತವಾಗಿ ಗೋಡ್ರೇಜ್ ಬಾಗಿಲು ತೆಗೆಸಿದ್ದಾರೆ. ಈ ವೇಳೆ ಗೋಡ್ರೇಜ್‌ನಲ್ಲಿದ್ದ 3 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನ, 1.50 ಲಕ್ಷ ರೂ.ನಗದು, ಒಂದು ಸ್ಯಾಮ್‌ಸಂಗ್ ಮೊಬೈಲ್ ಅನ್ನು ಎಗರಿಸಿದ್ದಾರೆ. ಇದನ್ನೂ ಓದಿ: ಬಪ್ಪನಾಡು ದೇವಸ್ಥಾನ ಹಾಗೂ ಮಾರಿಕಾಂಬಾ ದೇವಸ್ಥಾನ ಕಟ್ಟಿದವರು ಮುಸ್ಲಿಮರು: ರಿಜ್ವಾನ್
ಮೂವರು ದರೋಡೆಕೋರು ಒಳಗಡೆ ಬಂದಿದ್ದರೆ ಮೂವರು ಹೊರಗಡೆ ಇದ್ದರು. ದರೋಡೆಯ ಬಳಿಕ ಹೊರಗಡೆ ಇದ್ದವರು ದರೋಡೆಕೋರರ ಕೈಯಿಂದ ಹಣ, ಚಿನ್ನದ ಗಂಟನ್ನು ಪಡೆದಿದ್ದಾರೆ. ಕೊನೆಗೆ ಪರಾರಿಯಾಗುವುದಕ್ಕೂ ಮೊದಲು ಯಾರಿಗೂ ಹೇಳದಂತೆ ಮನೆಯ ಸದಸ್ಯರಿಗೆ ಬೆದರಿಕೆ ಹಾಕಿದ್ದಾರೆ.
ಈ ಘಟನೆ ರಾತ್ರಿ ಸುಮಾರು 8:30 ರಿಂದ 9 ಗಂಟೆಯ ವೇಳೆ ನಡೆದಿದೆ. ದರೋಡೆಕೋರರು ಅಪರಿಚಿತರಾಗಿದ್ದು, ತಮಿಳು ಭಾಷೆಯಲ್ಲಿ ಹಾಗೂ ಸನ್ನೆಗಳ ಮೂಲಕ ಸಂವಹನ ಮಾಡಿ ಕೃತ್ಯ ಎಸಗಿದ್ದಾರೆ.
ಶ್ರೀವತ್ಸ ಅವರು ಬೆಂಗಳೂರಿನಲ್ಲಿ ಐಟಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ವರ್ಕ್ ಫ್ರಂ ಹೋಂ ಇರುವ ಹಿನ್ನೆಲೆಯಲ್ಲಿ ಪತ್ನಿ ಮತ್ತು ಮಕ್ಕಳ ಜೊತೆ ಸ್ವಗ್ರಾಮಕ್ಕೆ ಬಂದು ಉದ್ಯೋಗ ಮಾಡುತ್ತಿದ್ದಾರೆ.