ಹೊಸಾ ಅಲೆ ಹಳೇ ಸೆಲೆಗಳೆಲ್ಲವೂ ಝಗಮಗಿಸುವ ಕಥೆಗಳ ಬೆಂಬೀಳೋದೇ ಹೆಚ್ಚಾದ್ದರಿಂದ ಹಳ್ಳಿ ಘಮಲಿನ ಕಥೆಗಳೇ ಅಪರೂಪವಾಗಿ ಬಿಟ್ಟಿವೆ. ಹಾಗೊಂದು ವೇಳೆ ಅಂಥಾ ಚಿತ್ರಗಳು ತೆರೆ ಕಂಡರೂ ಎಲ್ಲದರಲ್ಲಿಯೂ ವೀಕ್ ನೆಸ್ ಪ್ರಾಬ್ಲಮ್ಮಿನಿಂದ ಸೊರಗಿರುತ್ತವೆ. ಆದರೆ ಎಲ್ಲ ವಿಚಾರದಲ್ಲಿಯೂ ದಷ್ಟ ಪುಷ್ಟವಾಗಿರುವ ಮಿತ್ರಾ ಅಭಿನಯದ ಪರಸಂಗ ಎಲ್ಲ ವರ್ಗದ ಪ್ರೇಕ್ಷಕರನ್ನೂ ತಣಿಸುತ್ತಾ ಸಾರಾಸಗಟಾಗಿ ಎಲ್ಲರನ್ನು ಥೇಟರಿನತ್ತ ಸೆಳೆಯುತ್ತಿದೆ.
ಪ್ರೇಕ್ಷಕರ ಬಾಯಿ ಮಾತಿಂದಲೇ ಥೇಟರು ತುಂಬಿಸಿಕೊಂಡ ಚಿತ್ರಗಳು ಗೆದ್ದವೆಂದೇ ಅರ್ಥ. ಸದ್ಯ ಪರಸಂಗವೂ ಅಂಥಾದ್ದೇ ವಾತಾವರಣ ಸೃಷ್ಟಿಸಿರೋದರಿಂದ ಇದು ಗೆದ್ದ ಲಕ್ಷಣ ಎಂಬುದನ್ನು ಸಪರೇಟಾಗಿ ಹೇಳೋ ಅವಶ್ಯಕತೆಯಿಲ್ಲ!
ಯಾರಾದರೂ ಕಾಯಿಲೆ ಬಿದ್ದರೆ ಬೊಂಬೆಯೊಂದನ್ನು ತಯಾರಿಸಿ ಕಾಯಿಲೆಯನ್ನು ಅದರೊಳಗೆ ತುಂಬಿಸೋ ನಂಬಿಕೆಯಿಂದ ಅದನ್ನು ಗಡಿಯಾಚೆ ಬಿಟ್ಟು ಬರುವ ಒಂದು ಸಂಪ್ರದಾಯವಿದೆ. ಹಳ್ಳಿಗಾಡುಗಳಲ್ಲಿ ಇದು ಈಗಲೂ ಅಳಿದುಳಿದುಕೊಂಡಿದೆ. ಆ ಹಳ್ಳಿಯಲ್ಲಿ ತನ್ನ ವಿಧವೆ ತಾಯಿಯ ಜೊತೆ ಬದುಕುತ್ತಾ, ಊರ ಗೌಡನ ಮನೆಯಲ್ಲಿ ಚಾಕರಿ ಮಾಡಿಕೊಂಡಿರೋ ತಿಮ್ಮ ಕೂಡಾ ಗೊಂಬೆ ದಾಟಿಸುವ ವೃತ್ತಿಯನ್ನೂ ನಡೆಸಿಕೊಂಡು ಬಂದಿರುತ್ತಾನೆ. ಇಂಥವನಿಗೆ ಎತ್ತಣಿದ್ದೆಂತಲಿಂದಲೂ ಮ್ಯಾಚ್ ಆಗದ ಬೊಂಬೆಯಂಥಾ ಹುಡುಗಿಯೇ ಮಡದಿಯಾಗಿ ಬಂದು ಬಿಡುತ್ತಾಳೆ.
ಚಂಪಾ ಹೆಸರಿನ ಈ ಚೆಲುವೆ ಪರಿಸ್ಥಿತಿಯ ಸಂಕೋಲೆಗೆ ಸಿಲುಕಿ ತನಗೆ ಹೊಂದದ ತಿಮ್ಮನನ್ನು ಮದುವೆಯಾಗುತ್ತಾಳೆ. ಈ ನಡುವೆ ತಿಮ್ಮ ಮಡದಿನ ಮಾತು ಕೇಳಿ ಚಂಪಾ ಚಾಟ್ಸ್ ಎಂಬ ಹೋಟೆಲು ಶುರುವಿಟ್ಟುಕೊಂಡೇಟಿಗೆ ಚಂಪಾಕಲಿಯಂಥಾ ಚಂಪಾಳ ಮೇಲೆ ಇಡೀ ಊರ ಕಣ್ಣು ಬೀಳುತ್ತದೆ. ಚಂಪಾ ಕೂಡಾ ಅಂಥಾ ಪಡ್ಡೆಗಳ ಜೊತೆ ಮೆತ್ತಗೆ ನವರಂಗಿಯಾಟ ಶುರು ಮಾಡಿಕೊಳ್ಳುತ್ತಾಳೆ.
ಆದರೆ ಊರೆಲ್ಲ ಏನೇ ಹೇಳಿದರೂ ತಿಮ್ಮ ಮಾತ್ರ ತನ್ನ ಹೆಂಡತಿ ಪರಮ ಪತಿವ್ರತೆ ಎಂದೇ ನಂಬಿ ಕೂತಿರುತ್ತಾನೆ. ಹೀಗಿರುವಾಗಲೇ ಚಂಪಾ ಚಾಟ್ಸ್ ಎದುರಿಗೇ ಕ್ಲಿನಿಕ್ಕು ತೆರೆಯೋ ಸ್ಫುರದ್ರೂಪಿ ವೈದ್ಯನೂ ಚಂಪಾಳ ಬಾಧೆಗೆ ಟ್ರೀಟ್ ಮೆಂಟು ಶುರು ಮಾಡಿದಾಕ್ಷಣ ತಿಮ್ಮನ ಬದುಕಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತೆ. ಅದರಾಚೆಗಿನದ್ದು ಅಸಲೀ ಆಹ್ಲಾದ. ನಿರ್ದೇಶಕ ಕೆ.ಎಂ. ರಘು ತಾನೊಬ್ಬ ಅಪ್ಪಟ ಹಳ್ಳಿ ಘಮಲಿನ ಕಥೆ ಹೇಳೇ ಪಾರಂಗತ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಧೃಡಪಡಿಸಿದ್ದಾರೆ.
ಹಾಸ್ಯ ನಟರಾಗಿ ಬ್ರ್ಯಾಂಡ್ ಆಗಿದ್ದ ಮಿತ್ರಾ ಈ ಹಿಂದೆ ರಾಗ ಚಿತ್ರದ ಮೂಲಕ ಆ ಸೀಮೆ ದಾಟಿಕೊಂಡಿದ್ದರು. ಪರಸಂಗ ಚಿತ್ರದ ತನ್ಮಯ ನಟನೆಯಿಂದ ಯಾವ ಪಾತ್ರಕ್ಕೂ ಸೈ ಎನಿಸಿದ ಓರ್ವ ಅಪ್ಪಟ ಕಲಾವಿದನಾಗಿ ಮಿತ್ರಾ ಪ್ರೇಕ್ಷಕರನ್ನು ಮುಟ್ಟಿದ್ದಾರೆ. ಇನ್ನು ನಾಯಕಿ ಅಕ್ಷತಾ ಈ ಪಾತ್ರವನ್ನು ಮೈ ಮನಸುಗಳಿಗೆ ತುಂಬಿಕೊಂಡು ನಟಿಸೋ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ನೆಲೆ ನಿಲ್ಲವ ಕನಸನ್ನು ಖಂಡಿತಾ ನನಸು ಮಾಡಿಕೊಂಡಿದ್ದಾರೆ. ವೈದ್ಯನಾಗಿ ನಟಿಸಿರೋ ಮನೋಜ್, ಕನೆಕ್ಷನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಂದ್ರಪ್ರಭ ಸೇರಿದಂತೆ ಎಲ್ಲರದ್ದೂ ಮಾಗಿದ ನಟನೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಗೋವಿಂದೇಗೌಡರದ್ದೂ ಮನಸಲ್ಲುಳಿಯುವ ಪಾತ್ರ. ನಿರ್ದೇಶಕ, ಕ್ಯಾಮೆರಾ, ಸಂಗೀತ ಸೇರಿದಂತೆ ತಾಂತ್ರಿಕವಾಗಿಯೂ ವಿಶಿಷ್ಟವಾದ ಫೀಲ್ ಕೊಡುವ ಮೂಲಕ ಪರಸಂಗ ಚಿತ್ರ ಗೆಲುವಿನತ್ತ ದಾಪುಗಾಲಿಡುತ್ತಿದೆ.