ಬೆಂಗಳೂರು: ಸ್ಯಾಂಡಲ್‍ವುಡ್ ದಿಗ್ಗಜ ರೆಬೆಲ್‍ಸ್ಟಾರ್ ಅಂಬರೀಶ್‍ರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ನುಡಿ ನಮನ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು.
ಶ್ರದ್ಧಾಂಜಲಿ ಸಭೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹಾಗೂ ನಟ, ಸೊರಬ ಶಾಸಕ ಕುಮಾರ್ ಬಂಗಾರಪ್ಪ ಭಾಗಿ ಆಗಿದ್ದಾರೆ. ಆದ್ರೆ ಸಂಬಂಧದಲ್ಲಿ ಬಾವ-ಬಾಮೈದಾ ಆಗಿರುವ ಶಿವಣ್ಣ, ಕುಮಾರ್ ಬಂಗಾರಪ್ಪ ಎದುರು ಬದುರು ಆದರೂ ಮಾತಾಡದೇ ಮುನ್ನಡೆದಿದ್ದಾರೆ. ಪಕ್ಕದಲ್ಲೇ ಇದ್ದ ಜೈಜಗದೀಶ್‍ಗೆ ಹ್ಯಾಂಡ್ ಶೇಕ್ ಮಾಡಿದ ಶಿವಣ್ಣ ಬಾಮೈದನನ್ನು ನೋಡಿಯೂ ನೋಡದೆಯೇ ಮುಂದೆ ಹೋಗಿದ್ದಾರೆ. ಸಿನಿಮಾ ರಂಗದ ಸಭೆಯಲ್ಲೂ ಉಭಯ ನಾಯಕರು ಮುನಿಸು ಮುಂದುವರಿಸಿದ್ದಾರೆ.
ಕಾರ್ಯಕ್ರಮದಲ್ಲಿ ಫಿಲಂ ಚೇಂಬರ್ ಅಧ್ಯಕ್ಷ ಚಿನ್ನೇಗೌಡ, ಅಂಬಿ ಪತ್ನಿ ಸುಮಲತಾ, ಪುತ್ರ ಅಭಿಷೇಕ್ ಗೌಡ, ಶಿವಣ್ಣ, ಅಪ್ಪು, ಯಶ್, ದರ್ಶನ್, ಸುದೀಪ್, ಜೈಜಗದೀಶ್, ದೊಡ್ಡಣ್ಣ ಸೇರಿದಂತೆ ಇಡೀ ಚಿತ್ರರಂಗವೇ ಪಾಲ್ಗೊಂಡಿದೆ. ಜೊತೆಗೆ ಸಿಎಂ ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿ. ಸೋಮಣ್ಣ ಸೇರಿದಂತೆ ಹಲವು ಶಾಸಕರು ಭಾಗಿ ಆಗಿದ್ದಾರೆ. ಚಿತ್ರರಂಗ ಮತ್ತು ರಾಜಕೀಯ ರಂಗದ ಗಣ್ಯರು ಅಂಬಿ ಜೊತೆಗೆ ಕಳೆದ ಕ್ಷಣಗಳನ್ನು ಮೆಲುಕು ಹಾಕುತ್ತಾ ತಮ್ಮ ನೆನಪಿನ ಬುತ್ತಿಯನ್ನು ಬಿಚ್ಚಿಟ್ಟಿದ್ದಾರೆ. ಈ ಮೂಲಕ ಅಗಲಿದ ರೆಬೆಲ್‍ಸ್ಟಾರ್‍ಗೆ ನುಡಿ ನಮನ ಸಲ್ಲಿಸಿದ್ದಾರೆ.
ನವೆಂಬರ್ 24ರ ಶನಿವಾರ ರಾತ್ರಿ ನಟ ಅಂಬರೀಶ್ ಅವರು ಹೃದಯಾಘಾತದಿಂದ ನಗರದ ವಿಕ್ರಂ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದರು. ಅವರ ಅಂತಿಮ ಸಂಸ್ಕಾರವು ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತ್ತು. ಪತ್ನಿ, ಮಗ, ಕುಟುಂಬಸ್ಥರು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ ಅಂಬಿಗೆ ಇಡೀ ದೇಶವೇ ಕಂಬನಿ ಮಿಡಿದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv