ಸಿದ್ದರಾಮಯ್ಯ (Siddaramaiah) ಮುಖ್ಯಮಂತ್ರಿ ಆಗುತ್ತಿದ್ದಂತೆಯೇ ಮೈಸೂರಿನಲ್ಲಿ (Mysore) ಫಿಲ್ಮ್ ಸಿಟಿ ಆಗುವ ಸುದ್ದಿ ಮತ್ತೆ ಮುನ್ನೆಲೆಗೆ ಬಂದಿದೆ. ಮೊನ್ನೆಯಷ್ಟೇ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ (Girish Kasaravalli), ಪಿ. ಶೇಷಾದ್ರಿ, ಬಿ.ಎಸ್.ಲಿಂಗದೇವರು (Lingadevaru), ಖ್ಯಾತ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು, ಕನ್ನಡ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ, ಹಿರಿಯ ನಟ ಶ್ರೀನಿವಾಮೂರ್ತಿ, ನಿರ್ದೇಶಕ ಟಿ.ಎನ್. ಸೀತಾರಾಮ್, ನಟಿಯರಾದ ಅಕ್ಷತಾ ಪಾಂಡವಪುರ, ವಿಜಯಲಕ್ಷ್ಮಿ ಸಿಂಗ್ ಸೇರಿದಂತೆ ಹಲವರು ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಮೈಸೂರಿನಲ್ಲೇ ಫಿಲ್ಮ್ ಸಿಟಿ (Filmy City) ಮಾಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.
Advertisement
ಮನವಿ ಪತ್ರದಲ್ಲೇನಿದೆ?
Advertisement
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾಗಿ ತಾವು ಆಧಿಕಾರ ಸ್ವೀಕರಿಸಿರುವುದು ನಮಗೆಲ್ಲರಿಗೂ ಅತೀವ ಸಂತೋಷ ತಂದಿದೆ ಮತ್ತು ತಮಗೆ ಹೃದಯಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ತಾವು ಮೊದಲಿನಿಂದಲೂ ಕನ್ನಡ ಚಿತ್ರರಂಗದ ಒಳಿತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ನೀಡಿ ಪ್ರೋತ್ಸಾಹಿಸಿದ್ದೀರಿ. ಅವುಗಳಲ್ಲಿ ಮೈಸೂರು ವರುಣ ಕ್ಷೇತ್ರದಲ್ಲಿ ಚಿತ್ರನಗರಿ ಘೋಷಣೆ ಮಾಡಿದ್ದು ಕೂಡ ಒಂದು. ಸುಮಾರು ಆರು ವರ್ಷಗಳಿಂದ ಮೈಸೂರಿನ ಚಿತ್ರನಗರಿ ಕಾರ್ಯ ಕುಂಟುತ್ತಾ ನಡೆಯುತ್ತಿದೆ ಎಂಬುದನ್ನು ತಮ್ಮ ಗಮನಕ್ಕೆ ತರಲು ವಿಷಾದ ಎನ್ನಿಸುತ್ತಿದೆ.
Advertisement
Advertisement
ಈಗ ತಮ್ಮ ಗಮನಕ್ಕೆ ತರುವುದೇನೆಂದರೆ ಸದರಿ ಚಿತ್ರನಗರಿಗೆ ಈಗಾಗಲೇ ಭೂಮಿ ಮತ್ತು ರೂ 500 ಕೋಟಿಗಳ ಮಂಜೂರು ಆಗಿದ್ದು, ಕೆಐಎಡಿಬಿ ಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಚಿತ್ರನಗರಿಗೆ ಬೇಕಾದ ಭೂಮಿಯ ಹಸ್ತಾಂತರ ಪ್ರಕ್ರಿಯೆ ಚಾಲನೆಯಲ್ಲಿದ್ದು, ಕೆಐಎಡಿಬಿಗೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಹಣ ಸಂದಾಯದ ವಿಷಯದಲ್ಲಿ ಸಮಸ್ಯೆ ಉಂಟಾಗಿ ಮೈಸೂರಿನ ಚಿತ್ರನಗರಿ ಕಾರ್ಯ ಸ್ಥಗಿತಗೊಂಡಿದೆ. ತಾವು ದಯವಿಟ್ಟು ಈ ವಿಷಯದಲ್ಲಿ ಕೆಐಎಡಿಬಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡಿ ಚಿತ್ರನಗರದ ಕಾರ್ಯಕ್ಕೆ ವೇಗ ಕೊಡಬೇಕಾಗಿ ವಿನಂತಿ. ಇದನ್ನೂ ಓದಿ:‘ಗೀತಾ ಗೋವಿಂದಂ’ ತಂಡದಿಂದ ಹೊಸ ಚಿತ್ರ- ರಶ್ಮಿಕಾ ಬದಲು ವಿಜಯ್‌ಗೆ ನಾಯಕಿಯಾದ ಮೃಣಾಲ್
ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮನ್ನಣೆ ಪಡೆದಿರುವ ನಿರ್ದೇಶಕರು, ನಿರ್ಮಾಪಕರು ಮತ್ತು ಕಲಾವಿದರು ಮತ್ತು ಚಲನಚಿತ್ರರಂಗದಲ್ಲಿ ದುಡಿಯುತ್ತಿರು ಎಲ್ಲಾ ತಂತ್ರಜ್ಞರು ಮತ್ತು ಕಲಾವಿದರಿಗಾಗಿ ಯೋಜಿತ ಚಿತ್ರನಗರಿ ಪಕ್ಕದಲ್ಲಿ ನಿವೇಶನ ಕಲ್ಪ್ಪಿಸಲು ಗಂಧದ ಗುಡಿ ಗೃಹ ನಿರ್ಮಾಣ ಸಹಕಾರ ಸಂಘ (ನಿ) ಸ್ಥಾಪನೆಗೊಂಡಿದ್ದು, ದಿನಾಂಕ 15.10.2022 ರಂದು ಸದರಿ ಗೃಹ ನಿರ್ಮಾಣ ಸಂಘಕ್ಕೆ ರಿಯಾಯತಿ ದರದಲ್ಲಿ ಭೂಮಿ ಮಂಜೂರು ಮಾಡಲು ಮಾನ್ಯ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದೆವು. ಮಾನ್ಯ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಧನಾತ್ಮಕವಾಗಿ ಸ್ಪಂದಿಸಿ. ಮಾನ್ಯ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ, ಮೈಸೂರು ರವರಿಗೆ ಸದರಿ ಉದ್ದೇಶಕ್ಕೆ ಸರ್ಕಾರಿ ಜಾಗ ಲಭ್ಯವಿದ್ದರೆ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದ್ದರು. ಮಾನ್ಯ ಜಿಲ್ಲಾಧಿಕಾರಿಗಳು, ಮೈಸೂರು ಜಿಲ್ಲೆ, ತಮ್ಮ ಪತ್ರ ದಿನಾಂಕ 7.11.2022ರ ಮೂಲಕ ಮಾನ್ಯ ತಹಶೀಲ್ದಾರ್, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ, ಇವರಿಗೆ ನಿಯಮಾನುಸಾರ ಸ್ಥಳ ಪರಿಶೀಲನೆ ಮಾಡಿ ಸೂಕ್ತ ದಾಖಲೆಗಳೊಂದಿಗೆ ಸದರಿ ಉದ್ದೇಶಕ್ಕೆ ಸರ್ಕಾರಿ ಜಾಗ ಲಭ್ಯವಿದ್ದರೆ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದ್ದರು. ಮಾನ್ಯ ತಹಶೀಲ್ದಾರ್, ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ, ಇವರು ತಮ್ಮ ಪತ್ರದ ದಿನಾಂಕ 20.12.2022 ರಲ್ಲಿ ರಾಜಸ್ವ ನಿರೀಕ್ಷಕರು, ಚಿಕ್ಕಯ್ಯನಛತ್ರ ಹೋಬಳಿ ಇವರಿಗೆ ನಿಯಮಾನುಸಾರ ಸ್ಥಳ ಪರಿಶೀಲನೆ ಮಾಡಿ ಸೂಕ್ತ ದಾಖಲೆಗಳೊಂದಿಗೆ ಸದರಿ ಉದ್ದೇಶಕ್ಕೆ ಸರ್ಕಾರಿ ಜಾಗ ಲಭ್ಯವಿದ್ದರೆ ಪ್ರಸ್ತಾವನೆಯನ್ನು ಸಲ್ಲಿಸಲು ಸೂಚಿಸಿದ್ದಾರೆ.
ಎಲ್ಲಾ ಕಲಾಪ್ರಕಾರಗಳ ಸಂಯೋಜಿತ, ಸೃಜನಶೀಲ ಕಲೆ ಸಿನಿಮಾ. ಇದರಲ್ಲಿ ಪಾಲ್ಗೊಳ್ಳುವ ಸೃಜನಶೀಲರು ಕಲಾವಿದರು ಮತ್ತು ತಂತ್ರಜ್ಞರು. ಸಿನಿಮಾವನ್ನು ಕೇವಲ ಕಲೆ ಎಂದು ಮಾತ್ರ ಪರಿಗಣಿಸಲಾಗುವುದಿಲ್ಲ ಅದು ಉದ್ಯಮವೂ ಆಗಿ ಈಗ ಕಲೋದ್ಯಮ ಎಂಬುದಾಗಿ ಕರೆಯಲಾಗುತ್ತಿದೆ. ರಾಷ್ಟ್ರ ಕಟ್ಟುವ ಕೆಲಸಕ್ಕೆ ಅತ್ಯಂತ ಹೆಚ್ಚು ತೆರಿಗೆ ಕಟ್ಟುತ್ತಿರುವುದರಲ್ಲಿ ಈ ಕಲೋದ್ಯಮವೂ ಒಂದು. ಒಂದೇ ಭೂ ಪ್ರದೇಶದಲ್ಲಿ ಚಿತ್ರನಗರಿ ಮತ್ತು ತಂತ್ರಜ್ಞರು ಮತ್ತು ಕಲಾವಿದರಿಗಾಗಿ ನಿವೇಶನ ಮಾಡಿದಲ್ಲಿ ದೇಶಕ್ಕೆ ಒಂದು ಮಾದರಿ ಆಗುವುದರಲ್ಲಿ ಸಂಶಯವಿಲ್ಲ ಎಂಬುದನ್ನು ತಮ್ಮ ಗಮನಕ್ಕೆ ತರಲು ಇಚ್ಚಿಸುತ್ತೇವೆ.
ಈ ಎಲ್ಲ ಹಿನ್ನಲೆಯಲ್ಲಿ ಕನ್ನಡ ಚಿತ್ರೋದ್ಯಮ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕಾದರೆ ಮೈಸೂರಿನಲ್ಲಿ ಚಿತ್ರನಗರಿ ಚಾಲನೆ ಆಗಬೇಕಾಗಿದೆ ಮತ್ತು ಗಂಧದ ಗುಡಿ ಗೃಹ ನಿರ್ಮಾಣ ಸಹಕಾರ ಸಂಘ (ನಿ)ಕ್ಕೆ ರಿಯಾಯತಿ ದರದಲ್ಲಿ ಭೂಮಿ ಮಂಜೂರು ಮಾಡಬೇಕಾಗಿ ಈ ಮೂಲಕ ಮನವಿ ಮಾಡುತ್ತಿದ್ದೇವೆ ಎಂದು ಸುದೀರ್ಘವಾಗಿ ಮನವಿ ಪತ್ರ ಸಲ್ಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇವರ ಅವಧಿಯಲ್ಲಾದರೂ ಫಿಲ್ಮ್ ಸಿಟಿ ಆಗತ್ತಾ ಕಾದು ನೋಡಬೇಕು.